ಅಫ್ಘಾನಿಸ್ತಾನ್ ತಂಡದ ಗೆಲುವಿನ ಹಿಂದಿದೆ ಇಂಗ್ಲೆಂಡ್​ನ ಮಾಸ್ಟರ್​ಮೈಂಡ್

| Updated By: ಝಾಹಿರ್ ಯೂಸುಫ್

Updated on: Oct 16, 2023 | 7:13 PM

ಅಫ್ಘಾನ್ ಆಟಗಾರರಿಗೆ ಇನಿಂಗ್ಸ್​ ಆರಂಭಿಸುವ ಮುನ್ನ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸುವಂತೆ ಟ್ರಾಟ್ ಸೂಚನೆ ನೀಡಿದ್ದರು. ಅದರಂತೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ರಹಮಾನುಲ್ಲಾ ಗುರ್ಬಾಝ್ (80) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದರು.

ಅಫ್ಘಾನಿಸ್ತಾನ್ ತಂಡದ ಗೆಲುವಿನ ಹಿಂದಿದೆ ಇಂಗ್ಲೆಂಡ್​ನ ಮಾಸ್ಟರ್​ಮೈಂಡ್
ENG vs AFG
Follow us on

ಏಕದಿನ ವಿಶ್ವಕಪ್​ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಅಫ್ಘಾನಿಸ್ತಾನ್ ಐತಿಹಾಸಿಕ ಗೆಲುವು ದಾಖಲಿಸಿದೆ. ಅಫ್ಘಾನ್ ಪಡೆಯ ಈ ಗೆಲುವಿನ ಹಿಂದಿರುವುದು ಇಂಗ್ಲೆಂಡ್​ನ ಮಾಸ್ಟರ್​ಮೈಂಡ್ ಎಂಬುದು ವಿಶೇಷ.
ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನ್ ತಂಡದ ಕೋಚ್, ನಮ್ಮ ತಂಡವು ಯಾವುದೇ ಟೀಮ್​ ಅನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದರು. ಕೋಚ್​ನ ಹೇಳಿಕೆಯನ್ನು ಸಮರ್ಥಿಸುವಂತೆ ಅಫ್ಘಾನಿಸ್ತಾನ್ ತಂಡ ಬಲಿಷ್ಠ ಇಂಗ್ಲೆಂಡ್​ ತಂಡವನ್ನೇ ಬಗ್ಗು ಬಡಿದಿದೆ.

ವಿಶೇಷ ಎಂದರೆ ಇಲ್ಲಿ ಅಫ್ಘಾನಿಸ್ತಾನ್ ತಂಡದ ಕೋಚ್ ಮಾಜಿ ಇಂಗ್ಲೆಂಡ್ ಆಟಗಾರ. ಹೀಗಾಗಿ ಆಂಗ್ಲರನ್ನು ಬಗ್ಗು ಬಡಿಯಲು ಅಫ್ಘಾನ್ ತಂಡ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ವಿಶೇಷ ಯೋಜನೆ ರೂಪಿಸಿದ್ದರು. ಈ ಯೋಜನೆಯನ್ನು ಸಫಲಗೊಳಿಸುವಲ್ಲಿ ಅಫ್ಘಾನ್ ಆಟಗಾರರು ಯಶಸ್ವಿಯಾಗಿದ್ದಾರೆ.

ಅಫ್ಘಾನ್ ಆಟಗಾರರಿಗೆ ಇನಿಂಗ್ಸ್​ ಆರಂಭಿಸುವ ಮುನ್ನ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸುವಂತೆ ಟ್ರಾಟ್ ಸೂಚನೆ ನೀಡಿದ್ದರು. ಅದರಂತೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ರಹಮಾನುಲ್ಲಾ ಗುರ್ಬಾಝ್ (80) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದರು.

ಅಲ್ಲದೆ ಈ ಇನಿಂಗ್ಸ್​ ಅನ್ನು ಇತರೆ ಬ್ಯಾಟರ್​ಗಳು ಉತ್ತಮವಾಗಿ ಕೊಂಡೊಯ್ದರು. ಪರಿಣಾಮ 49.5 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ಆಲೌಟ್​ ಆದರೂ 284 ರನ್ ಕಲೆಹಾಕಿತ್ತು.

285 ರನ್​ಗಳು ಬಲಿಷ್ಠ ಇಂಗ್ಲೆಂಡ್ ಪಾಲಿಗೆ ಸುಲಭ ಗುರಿ ಎಂಬುದು ಜೊನಾಥನ್ ಟ್ರಾಟ್​ಗೂ ಚೆನ್ನಾಗಿ ಗೊತ್ತಿತ್ತು. ಆದರೆ ಅಫ್ಘಾನ್ ಸ್ಪಿನ್ನರ್​ಗಳ ಮೇಲೆ ವಿಶ್ವಾಸವಿರಿಸಿದ್ದ ಕೋಚ್ ಪವರ್​ಪ್ಲೇನಲ್ಲೇ ಮುಜೀಬ್ ರೆಹಮಾನ್​ನಿಂದ ಓವರ್​ ಹಾಕಿಸಲು ಸೂಚಿಸಿದ್ದರು.

ಇತ್ತ ವೇಗಿಗಳಿಗೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದ ಇಂಗ್ಲೆಂಡ್ ಬ್ಯಾಟರ್​ಗಳು ಸ್ಪಿನ್ನರ್​ಗಳ ವಿರುದ್ಧ ರನ್​ಗಳಿಸಲು ಪರದಾಡಿದರು. ಇದರ ಸಂಪೂರ್ಣ ಲಾಭ ಪಡೆದ ಮುಜೀಬ್ ಉರ್ ರೆಹಮಾನ್ 3 ವಿಕೆಟ್ ಉರುಳಿಸಿದರೆ, ಮೊಹಮ್ಮದ್ ನಬಿ 2 ವಿಕೆಟ್ ಪಡೆದರು. ಅಂತಿಮ ಹಂತದಲ್ಲಿ ಸ್ಪಿನ್ ಮೋಡಿ ಮಾಡಿದ ರಶೀದ್ ಖಾನ್ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 40.3 ಓವರ್​ಗಳಲ್ಲಿ 215 ರನ್​ಗಳಿಗೆ ಆಲೌಟ್ ಆಯಿತು.

ಈ ಮೂಲಕ ಸ್ಪಿನ್ ಅಸ್ತ್ರಗಳನ್ನೇ ಬಳಸಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯುವ ಕೋಚ್ ಜೊನಾಥನ್ ಟ್ರಾಟ್ ಅವರ ಮಾಸ್ಟರ್​ಪ್ಲ್ಯಾನ್ ಯಶಸ್ವಿಯಾಯಿತು. ಇತ್ತ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿರುವ ಆತ್ಮ ವಿಶ್ವಾಸದಲ್ಲಿ ಅಫ್ಘಾನ್ ಪಡೆ ತೇಲುತ್ತಿದೆ. ಈ ಆತ್ಮವಿಶ್ವಾಸದಲ್ಲಿ ಮುಂಬರುವ ಪಂದ್ಯಗಳಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳಿಗೂ ಸೋಲುಣಿಸುವ ವಿಶ್ವಾಸದಲ್ಲಿದೆ ಅಫ್ಘಾನ್ ಪಡೆ.

ಇದನ್ನೂ ಓದಿ: ಚೇಸ್ ಮಾಸ್ಟರ್…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ

ಇಂಗ್ಲೆಂಡ್ ಪರ ಮಿಂಚಿದ್ದ ಟ್ರಾಟ್:

ಇಂಗ್ಲೆಂಡ್ ಪರ 68 ಏಕದಿನ ಪಂದ್ಯಗಳನ್ನಾಡಿರುವ ಜೊನಾಥನ್ ಟ್ರಾಟ್ ಒಟ್ಟು 2819 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು.

ಅಫ್ಘಾನಿಸ್ತಾನ್ ತಂಡದ ಕೋಚ್ ಜೊನಾಥನ್ ಟ್ರಾಟ್

ಹಾಗೆಯೇ 52 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಟ್ರಾಟ್ ಒಟ್ಟು 3835 ರನ್​ ಗಳಿಸಿದ್ದರು. ಈ ವೇಳೆ 2 ದ್ವಿಶತಕ, 9 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.

2ನೇ ಬಾರಿ ಗೆದ್ದು ಬೀಗಿದ ಅಫ್ಘಾನ್:

ಏಕದಿನ ವಿಶ್ವಕಪ್​ನಲ್ಲಿ ಇದು ಅಫ್ಘಾನಿಸ್ತಾನ್ ತಂಡದ 2ನೇ ಗೆಲುವು. ಇದಕ್ಕೂ ಮುನ್ನ 2015ರ ಏಕದಿನ ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನ್ ಪಡೆ 1 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಅಫ್ಘಾನಿಸ್ತಾನ್ ತಂಡ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.