PAK Vs ENG: ಪಾಕಿಸ್ತಾನದಲ್ಲಿ ಶೌಚಾಲಯಕ್ಕೆ ಹೋಗುವುದಕ್ಕೂ ಭಯವಾಗುತ್ತಿದೆ..! ಇಂಗ್ಲೆಂಡ್ ಆಟಗಾರನ ದ್ವಂದ್ವ ಹೇಳಿಕೆ

| Updated By: ಪೃಥ್ವಿಶಂಕರ

Updated on: Sep 21, 2022 | 4:44 PM

PAK Vs ENG: ನಾನು ಶೌಚಾಲಯಕ್ಕೆ ಹೋದಾಗಲೆಲ್ಲಾ ಯಾರೋ ನನ್ನನ್ನು ಹಿಂಬಾಲಿಸುತ್ತಿರುವಂತೆ ಅಥವಾ ನನ್ನ ಹಿಂದೆ ನಿಂತಿರುವಂತೆ ಭಾಸವಾಗುತ್ತದೆ. ನಾನು ಹಿಂದೆಂದೂ ಈ ರೀತಿಯ ಅನುಭವವನ್ನು ಹೊಂದಿರಲಿಲ್ಲ ಎಂದಿದ್ದಾರೆ.

PAK Vs ENG: ಪಾಕಿಸ್ತಾನದಲ್ಲಿ ಶೌಚಾಲಯಕ್ಕೆ ಹೋಗುವುದಕ್ಕೂ ಭಯವಾಗುತ್ತಿದೆ..! ಇಂಗ್ಲೆಂಡ್ ಆಟಗಾರನ ದ್ವಂದ್ವ ಹೇಳಿಕೆ
ಇಂಗ್ಲೆಂಡ್ ತಂಡ
Follow us on

ಬರೋಬ್ಬರಿ 17 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಮಾಡಿರುವ ಇಂಗ್ಲೆಂಡ್ ಪಡೆ ಮೊದಲ ಪಂದ್ಯವನ್ನೇನೋ ಯಾವುದೇ ಅಡೆತಡೆಗಳಿಲ್ಲದೆ ಗೆದ್ದು ಮುಗಿಸಿದೆ. 7 ಟಿ20 ಪಂದ್ಯಗಳ ಸರಣಿ ನಿನ್ನೆಯಿಂದ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಪಾಕ್ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ. ಆದರೆ ಇದೆಲ್ಲದರ ನಂತರ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಇಂಗ್ಲೆಂಡ್ ಆಟಗಾರನ ಹೇಳಿಕೆ ಇಂದಿನ ಹೆಡ್ ಲೈನ್ ಆಗಿದೆ. ಈ ಆಟಗಾರ ನೀಡಿರುವ ಹೇಳಿಕೆ ಒಂದು ಕಡೆ ಪಾಕಿಸ್ತಾನ ಆಂಗ್ಲ ಆಟಗಾರರಿಗೆ ನೀಡಿರುವ ಭಿಗಿ ಭದ್ರತೆಯನ್ನು ತೋರಿಸಿದರೆ, ಇನ್ನೊಂದೆಡೆ ಈ ರೀತಿಯ ಭಯದ ವಾತಾವಣರದಲ್ಲಿ ಆಟಗಾರರು ಸರಣಿ ಆಡುತ್ತಿರುವುದಕ್ಕೆ ಮರುಕ ಉಂಟಾಗುತ್ತಿದೆ.

ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಹ್ಯಾರಿ ಬ್ರೂಕ್

ಸೆಪ್ಟೆಂಬರ್ 20 ರಂದು ಸಂಜೆ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ T20 ಪಂದ್ಯದಲ್ಲಿ ಹ್ಯಾರಿ ಬ್ರೂಕ್ 25 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. 168 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಬ್ರೂಕ್, 7 ಬೌಂಡರಿಗಳನ್ನು ಬಾರಿಸಿದ್ದರು. ಅವರ ಇನ್ನಿಂಗ್ಸ್‌ ಇಂಗ್ಲೆಂಡ್ ತಂಡದ ಗೆಲುವಿಗೆ ಅಂತಿಮ ಸ್ಪರ್ಶ ನೀಡಿತು.

ಶೌಚಾಲಯಕ್ಕೆ ಹೋದಾಗ ಯಾರೋ ಹಿಂದೆ ನಿಂತಿರುವಂತೆ ಅನಿಸುತ್ತದೆ – ಹ್ಯಾರಿ ಬ್ರೂಕ್

ಗೆಲುವಿನ ನಂತರ ಬ್ರೂಕ್​​ಗೆ ಪಾಕಿಸ್ತಾನ, ಇಂಗ್ಲೆಂಡ್ ಆಟಗಾರರ ಭದ್ರತೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಳಲಾಯಿತು. ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿದ ಬ್ರೂಕ್, “ನಾನು ಶೌಚಾಲಯಕ್ಕೆ ಹೋದಾಗಲೆಲ್ಲಾ ಯಾರೋ ನನ್ನನ್ನು ಹಿಂಬಾಲಿಸುತ್ತಿರುವಂತೆ ಅಥವಾ ನನ್ನ ಹಿಂದೆ ನಿಂತಿರುವಂತೆ ಭಾಸವಾಗುತ್ತದೆ. ನಾನು ಹಿಂದೆಂದೂ ಈ ರೀತಿಯ ಅನುಭವವನ್ನು ಹೊಂದಿರಲಿಲ್ಲ ಎಂದಿದ್ದಾರೆ. ಜೊತೆಗೆ ಪಾಕಿಸ್ತಾನ ನಮಗೆ ನೀಡಿರುವ ರಕ್ಷಣೆಯಲ್ಲಿ ನಾವು ತುಂಬಾ ಸುರಕ್ಷಿತವಾಗಿದ್ದೇವೆ. ಹಾಗೆಯೇ ಈ ರೀತಿಯ ಕ್ರಮವನ್ನು ನಾವು ಆನಂದಿಸುತ್ತಿದ್ದೇವೆ ಎಂದಿದ್ದಾರೆ.

ತಿರುಗಾಡಲು ಅವಕಾಶ ನೀಡದಿರುವುದು ನಾಚಿಕೆಗೇಡು – ನಾಸಿರ್ ಹುಸೇನ್

ಬ್ರೂಕ್ ಅವರ ಈ ಹೇಳಿಕೆಯ ನಂತರ, ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಪಾಕಿಸ್ತಾನದ ಮೇಲೆ ಆಕ್ರೋಶ ಹೊರಹಾಕಿದ್ದು, ಪಾಕಿಸ್ತಾನದಲ್ಲಿ ಆಟಗಾರರು ಭೇಟಿ ನೀಡಲು ಹಲವು ಪ್ರೆಕ್ಷಣೀಯ ಸ್ಥಳಗಳಿವೆ. ಹೀಗಾಗಿ ಇಂಗ್ಲೆಂಡಿನ ಆಟಗಾರರನ್ನು ಸುತ್ತಾಡಲು ಬಿಡದೆ ಕೇವಲ ಭದ್ರತಾ ವಲಯಗಳಲ್ಲಿ ಇರಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಪಾಕಿಸ್ತಾನವೇ ತನ್ನ ದೇಶದ ಸ್ಥಿತಿಯ ಬಗ್ಗೆ ಎಷ್ಟು ಚಿಂತಿತವಾಗಿದೆ ಎಂಬುದು ನಾಸಿರ್ ಅವರ ಮಾತುಗಳಿಂದ ಗೊತ್ತಾಗುತ್ತಿದೆ. ಇಂಗ್ಲೆಂಡಿನ ಯಾವುದೇ ಆಟಗಾರನಿಗೆ ಪಾಕ್ ನೆಲದಲ್ಲಿ ಏನೂ ಆಗಬಾರದು ಎಂದು ಪಾಕಿಸ್ತಾನ ಅವರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವುದು ಪಾಕ್ ನೆಲದಲ್ಲಿ ತುಂಬಿರುವ ಭಯದ ವಾತಾವರಣವನ್ನು ಇಡೀ ಜಗತ್ತಿಗೆ ಮತ್ತೊಮ್ಮೆ ಸಾಭೀತು ಮಾಡುವಂತಿದೆ.

Published On - 4:44 pm, Wed, 21 September 22