ICC Rankings: ಐಸಿಸಿ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದ ಶತಕ ವಂಚಿತ ಸ್ಮೃತಿ ಮಂಧಾನ; ನಾಯಕಿಗೂ ಮುಂಬಡ್ತಿ..!
ICC Rankings: ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 111 ರನ್ ಗಳಿಸಿದ್ದ ಮಂಧಾನ ಏಕದಿನ ಸರಣಿಯಲ್ಲೂ ಇದೇ ಫಾರ್ಮ್ ಮುಂದುವರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಮಂಧಾನ ಕೇವಲ 9 ರನ್ಗಳಿಂದ ಶತಕದಿಂದ ವಂಚಿತರಾದರು.
ಭಾರತದ ಸ್ಟಾರ್ ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಸದ್ಯಕ್ಕೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್‌ನಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮುಂದುವರೆಸಿದ್ದಾರೆ. ಇದು ಅವರಿಗೆ ಐಸಿಸಿ ಬಿಡುಗಡೆ ಮಾಡಿರುವ ಇತ್ತಿಚ್ಚಿನ ಶ್ರೇಯಾಂಕದಲ್ಲಿ (ICC Rankings) ಲಾಭ ತಂದುಕೊಟ್ಟಿದೆ. ತನ್ನ ಅದ್ಭುತ ಪ್ರದರ್ಶನದ ಬಲದ ಮೇಲೆ, ಮಂಧಾನ ಆಸೀಸ್ ತಂಡದ ನಾಯಕಿಯನ್ನು ಹಿಂದಿಕ್ಕಿದ್ದಾರೆ. ಮಂಗಳವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ಮಂಧಾನ ಎರಡು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಮೂಲಕ ಆಸ್ಟ್ರೇಲಿಯ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 111 ರನ್ ಗಳಿಸಿದ್ದ ಮಂಧಾನ ಏಕದಿನ ಸರಣಿಯಲ್ಲೂ ಇದೇ ಫಾರ್ಮ್ ಮುಂದುವರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಮಂಧಾನ ಕೇವಲ 9 ರನ್ಗಳಿಂದ ಶತಕದಿಂದ ವಂಚಿತರಾದರು. ಈ ಅದ್ಭುತ ಇನ್ನಿಂಗ್ಸ್ನಿಂದಾಗಿ ಏಕದಿನ ರ‍್ಯಾಂಕಿಂಗ್‌ನಲ್ಲಿಯೂ ಮುಂಬಡ್ತಿ ಪಡೆದಿರುವ ಮಂಧಾನ ಮೂರು ಸ್ಥಾನ ಮೇಲೇರಿ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಹರ್ಮನ್‌ಪ್ರೀತ್ ಕೌರ್ಗೂ ಲಾಭ
ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಈ ಶ್ರೇಯಾಂಕದಲ್ಲಿ ಲಾಭ ಪಡೆದಿದ್ದಾರೆ. ಏಕದಿನ ರ್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಜಿಗಿದು ಒಂಬತ್ತನೇ ಸ್ಥಾನ ಪಡೆದಿರುವ ಹರ್ಮನ್ ಟಾಪ್-10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ ರೌಂಡರ್ ದೀಪ್ತಿ ಶರ್ಮಾ ಕೂಡ ಅದ್ಭುತ ಆಟದ ಲಾಭ ಪಡೆದು 32ನೇ ಸ್ಥಾನಕ್ಕೆ ಏರಿದ್ದಾರೆ. ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ ಎಂಟು ಸ್ಥಾನ ಮೇಲೇರಿ 37ನೇ ಸ್ಥಾನಕ್ಕೆ ತಲುಪಿದ್ದಾರೆ.
ಟಿ20 ಶ್ರೇಯಾಂಕದಲ್ಲೂ ಲಾಭ ಪಡೆದಿರುವ ನಾಯಕಿ ಹರ್ಮನ್‌ಪ್ರೀತ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 14ನೇ ಸ್ಥಾನಕ್ಕೆ ಏರಿದ್ದಾರೆ. ಜೊತೆಗೆ 6ನೇ ಸ್ಥಾನದಲ್ಲಿರುವ ಶೆಫಾಲಿ ವರ್ಮಾ ಟಿ20ಯಲ್ಲಿ ಟಾಪ್-10ರಲ್ಲಿ ಕಾಣಿಸಿಕೊಂಡ ಟೀಂ ಇಂಡಿಯಾದ ಮತ್ತೊಬ್ಬ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇವರಲ್ಲದೆ ಬೌಲಿಂಗ್ನಲ್ಲಿ ವೇಗಿ ರೇಣುಕಾ ಸಿಂಗ್ ಕೂಡ ಟಾಪ್-10ರೊಳಗೆ ಪ್ರವೇಶಿಸಿದ್ದು, 10ನೇ ಸ್ಥಾನಕ್ಕೆ ತಲುಪಿದ್ದಾರೆ. ಹಾಗೆಯೇ ಸ್ಪಿನ್ನರ್ ರಾಧಾ ಯಾದವ್ 14ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ.
ಇಂಗ್ಲೆಂಡ್ ಆಟಗಾರ್ತಿಯರಿಗೂ ಲಾಭ
ಇಂಗ್ಲೆಂಡ್‌ನ ಎಮ್ಮಾ ಲಾಂಬಾ ಮತ್ತು ಸೋಫಿ ಎಕ್ಲೆಸ್ಟನ್ ಇಬ್ಬರೂ ತಲಾ ಮೂರು ಸ್ಥಾನ ಮೇಲಕ್ಕೇರಿ ಇದೀಗ ಕ್ರಮವಾಗಿ 64 ಮತ್ತು 72ನೇ ಸ್ಥಾನಕ್ಕೆ ತಲುಪಿದ್ದಾರೆ. ಚಾರ್ಲಿ ಡೀನ್ 86ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ಬೌಲರ್‌ಗಳ ಶ್ರೇಯಾಂಕದಲ್ಲಿ ಡೀನ್, ನಾಲ್ಕು ಸ್ಥಾನ ಮೇಲಕ್ಕೆತ್ತಿ 20 ನೇ ಸ್ಥಾನಕ್ಕೆ ಬಂದಿದ್ದಾರೆ. ಕೇಟ್ ಕ್ರಾಸ್ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.