IND vs AUS: ಬುಮ್ರಾ ಸೃಷ್ಟಿಸಿದ್ದ ಕಳಪೆ ದಾಖಲೆಯನ್ನು ಕೇವಲ 9 ತಿಂಗಳಲ್ಲೇ ಸರಿಗಟ್ಟಿದ ಹರ್ಷಲ್ ಪಟೇಲ್..!
Harshal Patel: ಗಾಯದ ಸಮಸ್ಯೆಯಿಂದ ಸುಮಾರು ಎರಡು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಹರ್ಷಲ್, ಆಸೀಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 49 ರನ್ ನೀಡಿದರು. ಜೊತೆಗೆ ಇವರ ಸ್ಪೆಲ್ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸಹ ಸೇರಿದ್ದವು.
ಪ್ರತಿ ಐಸಿಸಿ ಈವೆಂಟ್ ಆರಂಭಕ್ಕೂ ಮುನ್ನ ಸರ್ವ ವಿಭಾಗಗಳಲ್ಲೂ ಬಲಿಷ್ಠ ತಂಡವಂತೆ ಕಾಣಿಸಿಕೊಳ್ಳುವ ಟೀಂ ಇಂಡಿಯಾ (Team India) ಆ ಈವೆಂಟ್ ಮುಗಿಯುವುದರೊಳಗೆ ಒಂದಿಲ್ಲೊಂದು ಲೋಪಗಳೊಂದಿಗೆ ಟೂರ್ನಿಯಿಂದ ಹೊರಬೀಳುತ್ತದೆ. ಇತ್ತೀಚೆಗಷ್ಟೆ ಮುಕ್ತಯವಾದ ಏಷ್ಯಾಕಪ್ನಲ್ಲೂ ಇದೇ ರೀತಿಯ ದುಸ್ಥಿತಿಯನ್ನು ಟೀಂ ಇಂಡಿಯಾ ತಲುಪಿತ್ತು. ಆರಂಭಿಕ ಪಂದ್ಯಗಳನ್ನು ಬಿಟ್ಟರೆ ಭಾರತಕ್ಕೆ ಡೆತ್ ಓವರ್ಸ್ ಬೌಲಿಂಗ್ ತುಂಬಾ ತಲೆನೋವಾಗಿ ಪರಿಣಮಿಸಿತ್ತು. ಈಗ ಅದೇ ಸಮಸ್ಯೆ ಮುಂದುವರೆದಿದ್ದು, ಆಸೀಸ್ ವಿರುದ್ಧದ ಸರಣಿಯಲ್ಲೂ ಟೀಂ ಇಂಡಿಯಾದ ಡೆತ್ ಬೌಲಿಂಗ್ ಬಗ್ಗೆ ಆತಂಕ ಹೆಚ್ಚಾಗಿದೆ. ಅಲ್ಲದೆ ಜಸ್ಪ್ರೀತ್ ಬುಮ್ರಾ (Jasprit Bumrah) ಅನುಪಸ್ಥಿತಿಯೂ ತಂಡಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಬುಮ್ರಾ ಇಲ್ಲದ ಭಾರತದ ಬೌಲಿಂಗ್ ಸ್ಥಿತಿ ಹೇಗಿದೆ ಎಂಬುದಕ್ಕೆ ಹರ್ಷಲ್ ಪಟೇಲ್ (Harshal Patel) ಈ ವರ್ಷವೊಂದರಲ್ಲೇ ಮಾಡಿರುವ ಕಳಪೆ ದಾಖಲೆಯೊಂದು ಸಾಕ್ಷಿಯಾಗಿದೆ.
ಏಷ್ಯಾಕಪ್‌ನಲ್ಲಿ ನಿರಾಸೆ ಅನುಭವಿಸಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾದ ಡೆತ್ ಬೌಲರ್‌ಗಳ ಕಳಪೆ ದಾಳಿಗೆ ದಂಡ ತೆತ್ತಿದೆ. ಅದರಲ್ಲೂ ಟಿ20ಯಲ್ಲಿ ಭಾರತದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಬಳಕೆಯಾಗುತ್ತಿರುವ ಹರ್ಷಲ್ ಪಟೇಲ್ ಅವರನ್ನು ಆಸ್ಟ್ರೇಲಿಯದ ಬ್ಯಾಟ್ಸ್ಮನ್ಗಳು ಸುಲಭವಾಗಿ ದಂಡಿಸಿದ್ದು, 18ನೇ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿದ್ದರು.
ಬುಮ್ರಾ ದಾಖಲೆ ಸರಿಗಟ್ಟಿದ ಹರ್ಷಲ್
ಗಾಯದ ಸಮಸ್ಯೆಯಿಂದ ಸುಮಾರು ಎರಡು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಹರ್ಷಲ್, ಆಸೀಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 49 ರನ್ ನೀಡಿದರು. ಜೊತೆಗೆ ಇವರ ಸ್ಪೆಲ್ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸಹ ಸೇರಿದ್ದವು. ಇದರೊಂದಿಗೆ ಹರ್ಷಲ್ ಪಟೇಲ್, ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸುಮಾರು 6 ವರ್ಷಗಳಲ್ಲಿ ಮಾಡಿದ ಕಳಪೆ ದಾಖಲೆಯನ್ನು ಕೇವಲ ಒಂದೇ ವರ್ಷದಲ್ಲಿ ಸರಿಗಟ್ಟಿದರು.
ಅಂಕಿಅಂಶಗಳ ಪ್ರಕಾರ ಜನವರಿ 2016 ರಲ್ಲಿ ಟಿ20 ಕ್ರಿಕೆಟ್ ಪದಾರ್ಪಣೆ ಮಾಡಿದ ಜಸ್ಪ್ರೀತ್ ಬುಮ್ರಾ ಇದುವರೆಗೆ 58 ಪಂದ್ಯಗಳಲ್ಲಿ 1247 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಅದರಲ್ಲಿ ಅವರು 28 ಸಿಕ್ಸರ್ಗಳನ್ನೂ ತಿಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಹರ್ಷಲ್ ಪಟೇಲ್ ಕೇವಲ 2022 ರಲ್ಲೇ 320 ಎಸೆತಗಳನ್ನು ಬೌಲ್ ಮಾಡಿ, ಬರೋಬ್ಬರಿ 28 ಸಿಕ್ಸರ್‌ಗಳನ್ನು ತಿಂದಿದ್ದಾರೆ.
ಚಹಾಲ್ಗೆ ಹೆಚ್ಚು ಸಿಕ್ಸರ್ಸ್
ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ತಿಂದ ಭಾರತೀಯ ಬೌಲರ್ ಎಂಬ ಕುಖ್ಯಾತಿಗೆ ಹರ್ಷಲ್ ಪಟೇಲ್ ಗುರಿಯಾಗಿದ್ದಾರೆ. ಅಲ್ಲದೆ, ಹರ್ಷಲ್ ಮಾತ್ರವಲ್ಲ, ಅವೇಶ್ ಖಾನ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಬೌಲರ್‌ಗಳು ಸಹ ಸಾಕಷ್ಟು ದುಬಾರಿಯಾಗಿದ್ದಾರೆ. ಅವೇಶ್ ಖಾನ್ ಈ ವರ್ಷ ಕೇವಲ 281 ಎಸೆತಗಳಲ್ಲಿ 21 ಸಿಕ್ಸರ್ ತಿಂದಿದ್ದರೆ, 252 ಎಸೆತಗಳನ್ನು ಎಸೆದಿರುವ ಹಾರ್ದಿಕ್ 20 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ. ಅಂದಹಾಗೆ, ಇಡೀ ವೃತ್ತಿಜೀವನದಲ್ಲಿ, ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಎಸೆತಗಳಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳು ದಾಖಲಾಗಿವೆ. ಅವರು ಒಟ್ಟು 1523 ಎಸೆತಗಳನ್ನು ಬೌಲ್ ಮಾಡಿದ್ದು, ಅದರಲ್ಲಿ 106 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ. ಅಂದಹಾಗೆ, ಚಹಾಲ್ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, ಅವರು ತಮ್ಮ ಹೆಸರಿಗೆ 84 ವಿಕೆಟ್‌ಗಳನ್ನು ಹೊಂದಿದ್ದಾರೆ.
Published On - 5:49 pm, Wed, 21 September 22