ಕ್ಯಾಂಡಿಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ-ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಪಂದ್ಯದಲ್ಲಿ ಪಾಕ್ ವೇಗಿಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ವ್ಯಂಗ್ಯವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪಡೆ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ (Shaheen Afridi) ಮುಂದೆ ಮಂಡಿಯೂರಿತು. ಅದರಲ್ಲೂ ಶಾಹೀನ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರಿಂದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.
ವಾಸ್ತವವಾಗಿ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಎಡಗೈ ವೇಗಿ ಎದುರು ರನ್ ಗಳಿಸಲು ತಡಬಡಾಯಿಸುತ್ತಾರೆ ಎಂಬುದು ಜಗಜ್ಜಾಹೀರಾಗಿತ್ತು. ಇದೀಗ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಇದು ನಿಜ ಎಂಬಂತ್ತಾಗಿದೆ. ಪಾಕ್ ಎಡಗೈ ವೇಗಿ ಶಾಹೀನ್ ವಿರುದ್ಧ ರನ್ ಗಳಿಸುವುದಿರಲಿ, ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಹ ಭಾರತದ ಬ್ಯಾಟರ್ಗಳಿಗೆ ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್ಮನ್ಗಳು ಈ ಎಡಗೈ ವೇಗಿ ದಾಳಿಗೆ ಬಲಿಯಾದರು.
IND vs PAK: ಹಾಟ್ಸ್ಟಾರ್ನಲ್ಲಿ ದಾಖಲೆಯ ವೀಕ್ಷಣೆ ಕಂಡ ಭಾರತ- ಪಾಕ್ ಪಂದ್ಯ! ಮೈದಾನ ಮಾತ್ರ ಖಾಲಿ ಖಾಲಿ
ಇದಕ್ಕೆ ತದ್ವಿರುದ್ಧವಾಗಿ ಟೀಂ ಇಂಡಿಯಾವನ್ನು ಕಾಡಿದ ಶಾಹೀನ್ ತಮ್ಮ 10 ಓವರ್‌ಗಳ ಖೋಟಾದಲ್ಲಿ ಕೇವಲ 35 ರನ್‌ಗಳನ್ನು ನೀಡಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇದರಲ್ಲಿ ಆರಂಭಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ವಿಕೆಟ್ಗಳು ಸೇರಿದ್ದವು.
ಇದು ಸಾಲದೆಂಬಂತೆ ಮೊದಲ 10 ಓವರ್‌ಗಳಲ್ಲಿಯೇ ಭಾರತದ ಟಾಪ್ ಮೂರು ಬ್ಯಾಟರ್ಗಳು ಪಾಕ್ ವೇಗಿಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕಡಿಮೆ ಸ್ಕೋರ್‌ಗಳಿಗೆ ಔಟ್ ಮಾಡುವ ಮೂಲಕ ಶಾಹೀನ್ ಪಾಕಿಸ್ತಾನಕ್ಕೆ ಕನಸಿನ ಆರಂಭವನ್ನು ನೀಡಿದರು. ಭಾರತದ ನಾಯಕ ರೋಹಿತ್ ಕೇವಲ 11 ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೇವಲ ನಾಲ್ಕು ರನ್ಗಳಿಗೆ ಸುಸ್ತಾದರು.
ಪಾಕ್ ವೇಗಿ ಶಾಹೀನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಕಂಡು ಒಂದೆಡೆ ಟೀಂ ಇಂಡಿಯಾ ಫ್ಯಾನ್ಸ್ ಹಿಡಿ ಶಾಪ ಹಾಕುತ್ತಿದ್ದರೆ, ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ಬ್ಯಾಟರ್ಗಳ ಕಾಲೆಳೆದಿದ್ದಾರೆ. ತಮ್ಮ ಟ್ಟಿಟರ್ನಲ್ಲಿ ನಾಲ್ಕು ಪದದ ಪೋಸ್ಟ್ ಹಾಕಿರುವ ಷರೀಫ್ ಇದರಲ್ಲಿ “ಅವರು ಅವನನ್ನು ಆಡಲು ಸಾಧ್ಯವಿಲ್ಲ” (ಟೀಂ ಇಂಡಿಯಾ ಆಟಗಾರರಿಗೆ ಶಾಹೀನ್ ಅಫ್ರಿದಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿಲ್ಲ ಎಂಬರ್ಥದಲ್ಲಿ) ಎಂದು ಟ್ವೀಟ್ ಮಾಡಿದ್ದಾರೆ.
“THEY CANNOT PLAY HIM” https://t.co/wYmOCFezDR
— Shehbaz Sharif (@CMShehbaz) September 2, 2023
ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಟೀಂ ಇಂಡಿಯಾ ತನ್ನ ಅಗ್ರ ಕ್ರಮಾಂಕದ ವಿಫಲತೆಯ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರ 138 ರನ್ಗಳ ಜೊತೆಯಾಟದಿಂದಾಗಿ 266 ರನ್ ಕಲೆಹಾಕಿತು. ಭಾರತದ ಇನ್ನಿಂಗ್ಸ್ ಬಳಿಕ ಮಳೆ ಬಂದಿದ್ದರಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:59 am, Sun, 3 September 23