ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್

ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್

ಝಾಹಿರ್ ಯೂಸುಫ್
|

Updated on: Oct 07, 2024 | 2:09 PM

CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನೇತೃತ್ವದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಇಮ್ರಾನ್ ತಾಹಿರ್ ಮುಂದಾಳತ್ವದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವನ್ನು ಮಣಿಸಿದೆ. ಈ ಗೆಲುವಿನ ಬಳಿಕ ನಾಯಕ ಫಾಫ್ ಡುಪ್ಲೆಸಿಸ್, ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದು ವಿಶೇಷ.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 12ನೇ ಆವೃತ್ತಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಗಯಾನಾದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ಚೊಚ್ಚಲ ಟ್ರೋಫಿಯನ್ನು ಸ್ವೀಕರಿಸಲು ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟಿದ್ದರು ವಿಶೇಷ.

2024ರ ಟಿ20 ವಿಶ್ವಕಪ್ ಸ್ವೀಕರಿಸಲು ರೋಹಿತ್ ಶರ್ಮಾ ಲಿಯೋನೆಲ್ ಮೆಸ್ಸಿ ಸೆಲೆಬ್ರೇಷನ್ ಮಾದರಿಯಲ್ಲಿ ಎಂಟ್ರಿ ಕೊಟ್ಟಿದ್ದರು. ಈ ಶೈಲಿಯನ್ನೇ ಫಾಫ್ ಡುಪ್ಲೆಸಿಸ್ ಕೂಡ ಅನುಕರಿಸಿದ್ದಾರೆ. ಇದೀಗ ಈ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಝ್ (0) ಶೂನ್ಯಕ್ಕೆ ಔಟಾದರೆ, ಮೊಯೀನ್ ಅಲಿ 14 ರನ್​ಗಳಿಸಿ ಔಟಾದರು.

ಆ ಬಳಿಕ ಬಂದ ಶಾಯ್ ಹೋಪ್ 22 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 19 ರನ್​ಗಳ ಕೊಡುಗೆ ನೀಡಿದರು. ಇನ್ನು 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ವೈನ್ ಪ್ರಿಟೋರಿಯಸ್ 25 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್. ಈ ಮೂಲಕ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್​ ಕಲೆಹಾಕಿತು.

139 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ (21) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬಂದಿರಲಿಲ್ಲ. ಪರಿಣಾಮ 51 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ರೋಸ್ಟನ್ ಚೇಸ್ ಹಾಗೂ ಆರೋನ್ ಜೋನ್ಸ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 22 ಎಸೆತಗಳನ್ನು ಎದುರಿಸಿದ ರೋಸ್ಟನ್ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 39 ರನ್ ಬಾರಿಸಿದರೆ, ಜೋನ್ಸ್ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್​ನೊಂದಿಗೆ ಅಜೇಯ 48 ರನ್ ಸಿಡಿಸಿದರು. ಈ ಮೂಲಕ 18.1 ಓವರ್​ಗಳಲ್ಲಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ ಚೊಚ್ಚಲ ಬಾರಿ ಟ್ರೋಫಿ ಗೆದ್ದುಕೊಂಡಿದೆ.