ಫಾಫ್ ಡುಪ್ಲೆಸಿಸ್… ವಯಸ್ಸು 40 ವರ್ಷ. ವಯಸ್ಸಿನ ಕಾರಣದಿಂದಲೇ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಇನ್ನು ಇದೇ ವಯಸ್ಸಿನ ಕಾರಣ ಫಾಫ್ ಖರೀದಿಗೆ ಯಾವುದೇ ಫ್ರಾಂಚೈಸಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2 ಕೋಟಿ ರೂ. ಮೂಲ ಬೆಲೆಗೆ ಡುಪ್ಲೆಸಿಸ್ ಅವರನ್ನು ಖರೀದಿಸಿದ್ದರು.
ಇದೀಗ ಅದೇ 40 ವರ್ಷದ ಫಾಫ್ ಡುಪ್ಲೆಸಿಸ್ ಯುವಕರೇ ನಾಚುವಂತೆ ಫೀಲ್ಡಿಂಗ್ ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತ ಫ್ಲೇಯಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.
ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಫಾಫ್ ಇಂತಹದೊಂದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಈ ಪಂದ್ಯದಲ್ಲಿ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ಹಾಗೂ ಡೆಲ್ಲಿ ಬುಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಬುಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅಮೀರ್ ಹಂಝ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲಿ ಟಾಮ್ ಬ್ಯಾಂಟನ್ (9) ಡುಪ್ಲೆಸಿಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
ಆ ಬಳಿಕ ಬಂದ ಶಾದಾಬ್ ಖಾನ್ ಡೀಪ್ ಕವರ್ ಬೌಂಡರಿಯತ್ತ ಬಾರಿಸಲು ಪ್ರಯತ್ನಿಸಿದರು. ಗಾಳಿಯಲ್ಲಿ ಚಿಮ್ಮಿದ ಚೆಂಡನ್ನು ಎಕ್ಸ್ಟ್ರಾ ಕವರ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಫಾಫ್ ಡುಪ್ಲೆಸಿಸ್ ಓಡಿ ಹೋಗಿ ಚಕ್ಕನೆ ಜಿಗಿದು ಹಿಡಿದರು. ಅದು ಸಹ ಒಂದೇ ಕೈಯಲ್ಲಿ ಎಂಬುದು ವಿಶೇಷ.
ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಫಾಫ್ ಡುಪ್ಲೆಸಿಸ್ಗೆ ವಯಸ್ಸಾಯ್ತು ಅಂದೋರಿಗೆ ಈ ಫೀಲ್ಡಿಂಗ್ ಉತ್ತರ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ 40ರ ಹರೆಯದಲ್ಲೂ ಯುವಕರಂತೆ ಓಡಾಡುವ ಫಾಫ್ ಡುಪ್ಲೆಸಿಸ್ ಅತ್ಯದ್ಭುತ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗಿಸುವುದನ್ನು ಮುಂದುವರೆಸಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಈ ಕ್ಯಾಚ್.
40.Years.Old.🤯#ADT10onFanCode pic.twitter.com/w3QPBhsKtH
— FanCode (@FanCode) December 2, 2024
ಇದನ್ನೂ ಓದಿ: IPL 2025: ಐಪಿಎಲ್ ಅಖಾಡದಲ್ಲಿ 13 ಕನ್ನಡಿಗರು
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬುಲ್ಸ್ ತಂಡವು 10 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 89 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡವು 9.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.