Faf du Plessis: ಹೀನಾಯವಾಗಿ ಸೋತರೂ ಧೃತಿಗೆಡದ ಡುಪ್ಲೆಸಿಸ್: ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ?

| Updated By: Vinay Bhat

Updated on: Apr 24, 2022 | 8:57 AM

RCB vs SRH, IPL 2022: ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ಆರ್​ಸಿಬಿ ನೀಡಿದ್ದು ಐಪಿಎಲ್ 2022 ರ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಪಂದ್ಯ ಮುಗಿದ ಬಳಿಕ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.

Faf du Plessis: ಹೀನಾಯವಾಗಿ ಸೋತರೂ ಧೃತಿಗೆಡದ ಡುಪ್ಲೆಸಿಸ್: ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ?
Faf duPlessis post-match presentation RCB vs SRH
Follow us on

ಶನಿವಾರ ನಡೆದ ಸನ್​​ರೈಸರ್ಸ್​​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB vs SRH) ತಂಡ ಹೀನಾಯವಾಗಿ ಸೋಲು ಕಂಡಿತು. ಐಪಿಎಲ್ 2022 ರಲ್ಲಿ (IPL 2022) ಆರ್​​ಸಿಬಿ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಬ್ಯಾಟರ್​ಗಳ ಬಲದಿಂದಲೇ ಗೆಲುವು ಕಂಡುಕೊಳ್ಳುತ್ತಿದ್ದ ಫಾಫ್ ಪಡೆ ಈ ಬಾರಿ ಹೈದರಾಬಾದ್ ಬೌಲರ್​ಗಳ ದಾಳಿಗೆ ನಲುಗಿ ಹೋಯಿತು. ಆರ್‌ಸಿಬಿ 16.1 ಓವರ್‌ಗಳಲ್ಲಿ 68 ರನ್‌ಗಳಿಗೆ ಆಲೌಟ್ ಆದರೆ ಎಸ್​ಆರ್​ಹೆಚ್ ತಂಡ ಅಭಿಷೇಕ್ ಶರ್ಮ (47ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 72 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಈ ಸೋಲಿನೊಂದಿಗೆ ಐಪಿಎಲ್​ನಲ್ಲಿ 70 ಅಥವಾ ಅದಕ್ಕಿಂತ ಕಡಿಮೆ ರನ್​ಗಳ ಒಳಗೆ ಅತೀ ಹೆಚ್ಚು ಬಾರಿ ಆಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆ ಆರ್​ಸಿಬಿ ಪಾಲಾಯಿತು. ಇದರ ನಡುವೆ ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.

“ಮೊದಲ ನಾಲ್ಕು ಓವರ್​ಗಳಲ್ಲಿ ನಾವು ತುಂಬಾ ವಿಕೆಟ್​ಗಳನ್ನು ಕಳೆದುಕೊಳ್ಳಲೇ ಬಾರದು. ಆರಂಭದಲ್ಲಿ ನಾವು ತಾಳ್ಮೆಯಿಂದ ನೋಡಿಕೊಂಡು ಆಟವಾಡಬೇಕಿತ್ತು. ಪವರ್‌ಪ್ಲೇನಲ್ಲಿ ಕೆಲವು ರನ್‌ಗಳನ್ನು ಬಿಟ್ಟುಕೊಟ್ಟರೂ ದುರ್ಬಲವಾಗಿರುವ ಜಾಗದಲ್ಲಿ ಬಲಿಷ್ಠವಾಗಲು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಪಂದ್ಯ ಆರಂಭವಾದಾಗ ಚೆಂಡು ಹೆಚ್ಚು ಸ್ವಿಂಗ್ ಮತ್ತು ಸೀಮ್ ಆಗುತ್ತಿದೆ. ಈ ವೇಳೆ ಆ ಚೆಂಡನ್ನು ನಾವು ಸರಿಯಾಗಿ ಎದುರಿಸಿ ಆ ಹಂತವನ್ನು ನಾವು ದಾಟಬೇಕು. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗುತ್ತದೆ. ನಮ್ಮ ವಿರುದ್ಧ ಎಸ್​​ಆರ್​​ಹೆಚ್ ಬೌಲರ್​​ಗಳು ಮೇಲುಗೈ ಸಾಧಿಸಿದರು. ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ತಡೆಯಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿತ್ತು,” ಎಂದು ಹೇಳಿದ್ದಾರೆ.

“ಜೇಸನ್ ಮಾರಕ ಬೌಲಿಂಗ್ ಮಾಡುವ ಮೂಲಕ ಆರಂಭದಲ್ಲಿಯೇ ನಮಗೆ ಆಘಾತವನ್ನುಂಟು ಮಾಡಿದರು. ಅವರು ತಮ್ಮ ಮೊದಲ ಓವರ್​ನಲ್ಲೇ ಎರಡು ಕಡೆಗೆ ಚೆಂಡನ್ನು ಸ್ವಿಂಗ್ ಮಾಡಿದರು. ದೊಡ್ಡ ವಿಕೆಟ್​​ಗಳನ್ನು ಕಿತ್ತುಕೊಂಡರು. ಆರ್​ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಭನ್ನೇ ಮುರಿದುಹಾಕಿದರು. ಪರಿಣಾಮ ನಾವು ನಂತರ ಚೇತರಿಕೆ ಕಾಣದೆ ಸಣ್ಣ ಮೊತ್ತಕ್ಕೆ ಆಲೌಟ್‍ ಆದೆವು. ಇದೊಂದು ಕೆಟ್ಟ ದಿನ. ಆದರೆ, ನಾವು ಧೃತಿಗೆಡುವುದಿಲ್ಲ. ಇದು ದೊಡ್ಡ ಟೂರ್ನಮೆಂಟ್. ತಪ್ಪನ್ನು ಸರಿಪಡಿಸಿಕೊಂಡು ಕಮ್​ಬ್ಯಾಕ್ ಮಾಡುತ್ತೇವೆ,” ಎಂಬುದು ಫಾಫ್ ಮಾತು.

ಗೆದ್ದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, “ನಮ್ಮ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಇದು ಅವರ ಅಮೋಘ ಪ್ರದರ್ಶನವಾಗಿದೆ. ಈ ಗೆಲುವಿನಿಂದ ನಾವು ಮತ್ತೊಂದು ಚಾಲೆಂಜ್​ಗೆ ಸಿದ್ಧರಾಗಬೇಕಿದೆ. ಈ ಸೀಸನ್​ನಲ್ಲಿ ಚೆಂಡು ಚೆನ್ನಾಗಿ ಸ್ವಿಂಗ್ ಆಗುತ್ತಿದೆ. ಇದು ಪವರ್ ಪ್ಲೇನಲ್ಲಿ ವಿಕೆಟ್ ಪಡೆಯಲು ಸಹಕಾರಿ ಆಗುತ್ತಿದೆ. ಜೇಸನ್ ತುಂಬಾ ಕೆಲಸ ಮಾಡಿದ್ದರು. ಅವರಲ್ಲಿ ವಿಶೇಷವಾದ ಕೌಶಲ್ಯವಿದೆ. ಅವರು ನಮಗೆ ಸಿಕ್ಕಿರುವುದು ಅದೃಷ್ಟ. ಅಭಿಷೇಕ್ ಬ್ಯಾಟಿಂಗ್​ನಲ್ಲಿ ಚೆನ್ನಾಗಿ ಆಡಿದರು. ಅವರ ಟೈಮಿಂಗ್ ಅದ್ಭುತವಾಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಸವಾಲುಗಳಿದೆ ಅದಕ್ಕೆ ತಯಾರಾಗುತ್ತೇವೆ,” ಎಂದು ವಿಲಿಯಮ್ಸನ್ ಹೇಳಿದ್ದಾರೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯಕ್ಕೆ ಬೆಲೆತೆತ್ತ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ತಂಡ ಹೀನಾಯ ಸೋಲು ಕಂಡಿತು. ಅನಿರೀಕ್ಷಿತ ಕುಸಿತ ಕಂಡ ಪರಿಣಾಮ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 9 ವಿಕೆಟ್‌ಗಳಿಂದ ಶರಣಾಯಿತು. ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿದ ಆರ್‌ಸಿಬಿಗೆ ಎಸ್​ಆರ್​ಹೆಚ್​ನ ಮೂವರು ಎಡಗೈ ಬೌಲರ್‌ಗಳಾದ ಮಾರ್ಕೋ ಜೇಸನ್, ಟಿ. ನಟರಾಜನ್ ಹಾಗೂ ಸ್ಪಿನ್ನರ್ ಜೆ.ಸುಚಿತ್ ಮಾರಕ ದಾಳಿಗೆ ನಲುಗಿತು.

RCB vs SRH: ಇದು ಬೌಲರ್​​ಗಳ ತಂಡ: ಸತತ ಐದನೇ ಪಂದ್ಯವನ್ನೂ ಗೆದ್ದ ಸನ್​ರೈಸರ್ಸ್​​ ಹೈದರಾಬಾದ್