ಕೊನೆಗೂ ಟ್ರೋಫಿ ಮುಟ್ಟಿದೆ… ನಖ್ವಿಯನ್ನು ಕಿಚಾಯಿಸಿದ ಸೂರ್ಯಕುಮಾರ್

India vs Pakistan: ಏಷ್ಯಾಕಪ್​ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ 146 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ 150 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಇನ್ನೂ ಸಹ ಏಷ್ಯಾಕಪ್ ಟ್ರೋಫಿ ನೀಡಲಾಗಿಲ್ಲ.

ಕೊನೆಗೂ ಟ್ರೋಫಿ ಮುಟ್ಟಿದೆ... ನಖ್ವಿಯನ್ನು ಕಿಚಾಯಿಸಿದ ಸೂರ್ಯಕುಮಾರ್
Mohsin naqvi - Suryakumar Yadav

Updated on: Nov 09, 2025 | 11:53 AM

ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ಇನ್ನು ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಭಾರತ ತಂಡ ಜಯಭೇರಿ ಬಾರಿಸಿತು. ಆದರೆ ಕೊನೆಯ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿದೆ. ಈ ರದ್ದಾಗುವಿಕೆಯ ಹೊರತಾಗಿಯೂ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟ್ರೋಫಿ ಸ್ವೀಕರಿಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್ ಅವರಿಗೆ ಸರಣಿ ಗೆದ್ದಿರುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ನಗುತ್ತಾ ಉತ್ತರಿಸಿದ ಸೂರ್ಯಕುಮಾರ್,  ಕೊನೆಗೂ ಟ್ರೋಫಿಯನ್ನು ಮುಟ್ಟಲು ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ ಎಂದರು.

ಸರಣಿ ಗೆಲುವಿನ ಟ್ರೋಫಿಯನ್ನು ನನಗೆ ಹಸ್ತಾಂತರಿಸಿದಾಗ ವಿಶೇಷ ಅನುಭವವಾಯಿತು. ಕೆಲವು ದಿನಗಳ ಹಿಂದೆ ಭಾರತಕ್ಕೆ ಟ್ರೋಫಿ ಬಂದಿತ್ತು. ನಮ್ಮ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದಿದೆ. ಇದೀಗ ಈ ಟ್ರೋಫಿಯನ್ನು ಮುಟ್ಟಲು ಅವಕಾಶ ಸಿಕ್ಕಿದ್ದು ಕೂಡ ಖುಷಿ ಕೊಟ್ಟಿದೆ ಎಂದು ಸೂರ್ಯಕುಮಾರ್ ಯಾದವ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಪರೋಕ್ಷವಾಗಿ ಕಿಚಾಯಿಸಿದರು.

ಸೂರ್ಯಕುಮಾರ್ ಯಾದವ್ ಟ್ರೋಫಿ ಮುಟ್ಟಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದೇಳಲು ಮುಖ್ಯ ಕಾರಣ ಏಷ್ಯಾಕಪ್ ಟ್ರೋಫಿ ವಿವಾದ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಭಾರತ ತಂಡ ಏಷ್ಯಾಕಪ್ ಗೆದ್ದುಕೊಂಡಿತ್ತು.

ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು. ಇದಕ್ಕೆ ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿರುವುದು. ಹೀಗಾಗಿಯೇ ಟೀಮ್ ಇಂಡಿಯಾ ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಸ್ವೀಕರಿಸಲು ನಿರಾಕರಿಸಿತ್ತು.

ಅತ್ತ ಭಾರತೀಯ ಆಟಗಾರರು ತನ್ನಿಂದ ಟ್ರೋಫಿ ಸ್ವೀಕರಿಸಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮೊಹ್ಸಿನ್ ನಖ್ವಿ, ಏಷ್ಯಾ ಕಪ್ ಟ್ರೋಫಿ ಹಾಗೂ ವಿನ್ನರ್ ಮೆಡಲ್​ಗಳನ್ನು ಹೊಟೇಲ್​ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಇದರಿಂದಾಗಿ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದ್ದರು.

ಇದೀಗ ಏಷ್ಯಾಕಪ್ ಮುಗಿದು ತಿಂಗಳು ಕಳೆದರೂ ಭಾರತಕ್ಕೆ ಟ್ರೋಫಿ ಹಿಂತಿರುಗಿಸಿಲ್ಲ. ಮೊಹ್ಸಿನ್ ನಖ್ವಿ ಅವರ ಈ ಮೊಂಡುತನ ಬಗ್ಗೆ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ಸಲ್ಲಿಸಿದರೂ ಇನ್ನೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: IPL 2026: ಐಪಿಎಲ್ ರಿಟೆನ್ಷನ್​​ಗೆ ಡೇಟ್ ಫಿಕ್ಸ್

ಇತ್ತ ಸೂರ್ಯಕುಮಾರ್ ಯಾದವ್ ತನ್ನ ನಾಯಕತ್ವದಲ್ಲಿ ಗೆದ್ದ ಮೊದಲ ಮಲ್ಟಿ ನೇಷನ್ ಟೂರ್ನಿ ಇದಾಗಿದ್ದು, ಇದಾಗ್ಯೂ ಅವರು ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸರಣಿಯಲ್ಲಿ ಟ್ರೋಫಿ ಮುಟ್ಟಲು ಸಾಧ್ಯವಾಗಿರುವುದು ಖುಷಿ ಕೊಟ್ಟಿದೆ ಎಂದು ಸೂರ್ಯಕುಮಾರ್ ಯಾದವ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಟ್ರೋಲ್ ಮಾಡಿದ್ದಾರೆ.