ನ್ಯೂಝಿಲೆಂಡ್ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ (Super Smash 2024) ಟಿ20 ಲೀಗ್ನಲ್ಲಿ ಫಿನ್ ಅಲೆನ್ (Finn Allen) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಕ್ಯಾಂಟರ್ಬರಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಕ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕ್ಯಾಂಟರ್ಬರಿ ತಂಡದ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಅದರಲ್ಲೂ ಸ್ಟಾರ್ ಆಟಗಾರ ಡೇರಿಲ್ ಮಿಚೆಲ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಿಚೆಲ್ 50 ಎಸೆತಗಳನ್ನು ಎದುರಿಸಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಬಾರಿಸಿದ್ದು ಕೇವಲ 57 ರನ್ಗಳು ಮಾತ್ರ. ಪರಿಣಾಮ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕ್ಯಾಂಟರ್ಬರಿ ತಂಡ 140 ರನ್ಗಳಿಸಲಷ್ಟೇ ಶಕ್ತರಾದರು.
141 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆಕ್ಲೆಂಡ್ ತಂಡಕ್ಕೆ ಯುವ ಆರಂಭಿಕ ಆಟಗಾರ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅಲೆನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಮತ್ತೊಂದೆಡೆ ಮಾರ್ಕ್ ಚಾಪ್ಮನ್ 38 ರನ್ಗಳ ಕೊಡುಗೆಯೊಂದಿಗೆ ಅಲೆನ್ಗೆ ಉತ್ತಮ ಸಾಥ್ ನೀಡಿದರು.
ಕ್ಯಾಂಟರ್ಬರಿ ಬೌಲರ್ಗಳ ಮನಸೋ ಇಚ್ಛೆ ದಂಡಿಸಿದ ಫಿನ್ ಅಲೆನ್ 46 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 78 ರನ್ ಬಾರಿಸಿದರು. ಈ ಮೂಲಕ 15.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿ ಆಕ್ಲೆಂಡ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕ್ಯಾಂಟರ್ಬರಿ ಪ್ಲೇಯಿಂಗ್ 11: ಚಾಡ್ ಬೋವ್ಸ್ , ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಕೋಲ್ ಮೆಕಾಂಚಿ (ನಾಯಕ) , ಮೈಕೆಲ್ ರಿಪ್ಪನ್ , ಜಕಾರಿ ಫೌಲ್ಕ್ಸ್ , ಇಶ್ ಸೋಧಿ , ಮ್ಯಾಟ್ ಹೆನ್ರಿ , ಮೈಕೆಲ್ ರೇ , ವಿಲಿಯಂ ಓರ್ಕೆ.
ಇದನ್ನೂ ಓದಿ: Cheteshwar Pujara: ದಾಖಲೆಯ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ
ಆಕ್ಲೆಂಡ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಫಿನ್ ಅಲೆನ್ , ಸೀನ್ ಸೋಲಿಯಾ , ರಾಬರ್ಟ್ ಓಡೊನ್ನೆಲ್ (ನಾಯಕ) , ಮಾರ್ಕ್ ಚಾಪ್ಮನ್ , ಕ್ಯಾಮ್ ಫ್ಲೆಚರ್ (ವಿಕೆಟ್ ಕೀಪರ್) , ರಿಯಾನ್ ಹ್ಯಾರಿಸನ್ , ಡ್ಯಾನ್ರು ಫರ್ನ್ಸ್ , ಲಾಕಿ ಫರ್ಗುಸನ್ , ಲೂಯಿಸ್ ಡೆಲ್ಪೋರ್ಟ್ , ಬೆನ್ ಲಿಸ್ಟರ್.