ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ (ODI World Cup 2023) ಆರಂಭವಾಗಲಿದೆ. ವಿಶ್ವಕಪ್ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಮಹಾಸಮರಕ್ಕೆ ಭಾರತದ 9 ನಗರಗಳು ಆತಿಥ್ಯವಹಿಸುತ್ತಿವೆ. ಇದರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ (Eden Gardens) ಕೂಡ ಒಂದಾಗಿದೆ. ಸೆಮಿಫೈನಲ್ ಸೇರಿದಂತೆ ಒಟ್ಟು ಐದು ವಿಶ್ವಕಪ್ ಪಂದ್ಯಗಳು ಈ ಮೈದಾನದಲ್ಲಿ ನಡೆಯಲಿವೆ. ಆದರೆ ಅದಕ್ಕೂ ಮುನ್ನ ಈ ಮೈದಾನದಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬುಧವಾರ ರಾತ್ರಿ 11:50ರ ಸುಮಾರಿಗೆ ಈಡನ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ 2 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ, ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಈಡನ್ ಗಾರ್ಡನ್ಸ್ನಲ್ಲಿ ಮಧ್ಯರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ವಿದೇಶ ತಂಡದ ಡ್ರೆಸ್ಸಿಂಗ್ ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ಈ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಕೂಡಲೇ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಒಂದು ಗಂಟೆಯೊಳಗೆ ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ವರದಿಯಾಗಿದೆ.
ODI World Cup 2023: 2 ಬದಲಾವಣೆ; ಟೀಂ ಇಂಡಿಯಾದ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ ಹೀಗಿದೆ
ಆದರೆ, ಅಷ್ಟರಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಅಲ್ಲಲ್ಲಿ ಬಿದ್ದಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಡ್ರೆಸ್ಸಿಂಗ್ ರೂಮಿನ ಮರದ ಫಾಲ್ಸ್ ಸೀಲಿಂಗ್‌ನಿಂದ ಹೊಗೆ ಬರುತ್ತಿತ್ತು ಎನ್ನಲಾಗಿದ್ದು, ಚಾವಣಿಗೆ ಬೆಂಕಿ ವ್ಯಾಪಿಸುವ ಮುನ್ನ ಚಾವಣಿಯ ಒಂದು ಭಾಗವನ್ನು ಕೆಡವಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಗ್ನಿಶಾಮಕ ದಳದ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.
ಇನ್ನು ಇದೇ ಈಡನ್ ಮೈದಾನದಲ್ಲಿ ಐದು ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಹೀಗಾಗಿ ಕ್ರೀಡಾಂಗಣದಲ್ಲಿ ನವೀಕರಣಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಐಸಿಸಿ ಮತ್ತು ಬಿಸಿಸಿಐ ತಂಡವೊಂದು ಈಡನ್ ಗಾರ್ಡನ್‌ಗೆ ಭೇಟಿ ನೀಡಿತ್ತು. ಈ ವೇಳೆ ಮೈದಾನದ ನವೀಕರಣ ನೋಡಿದ ಉಭಯ ನಿಯೋಗಕ್ಕೆ ತೃಪ್ತಿ ತಂದಿತ್ತು. ಇದೀಗ ಐಸಿಸಿ ಮತ್ತು ಬಿಸಿಸಿಐ ತಂಡ ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಭೇಟಿ ನೀಡಲಿದೆ.
ಅಕ್ಟೋಬರ್ 28; ನೆದರ್ಲೆಂಡ್ಸ್ vs ಬಾಂಗ್ಲಾದೇಶ
ಅಕ್ಟೋಬರ್ 31; ಪಾಕಿಸ್ತಾನ vs ಬಾಂಗ್ಲಾದೇಶ
ನವೆಂಬರ್ 5; ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 11; ಇಂಗ್ಲೆಂಡ್ vs ಪಾಕಿಸ್ತಾನ
ನವೆಂಬರ್ 16; ಸೆಮಿಫೈನಲ್ 2 ಪಂದ್ಯ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ