India vs England | ಡೇವಿಡ್ ಮಲಾನ್: ಟಿ-20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಚಾಂಪಿಯನ್ ಬ್ಯಾಟ್ಸ್​ಮನ್!

|

Updated on: Mar 10, 2021 | 9:31 PM

ಮಲಾನ್, ಟಿ20 ಕ್ರಿಕೆಟ್​ನಲ್ಲಿ ಕಳೆದೆರಡು ವರ್ಷಗಳಿಂದ ಅತ್ಯುತ್ತಮ ಆಟವಾಡುತ್ತಿದ್ದಾರೆ ಮತ್ತು ತಮ್ಮ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 2017ರಲ್ಲಿ ಇಂಗ್ಲೆಂಡ್ ಪರ ಈ ಆವೃತ್ತಿಯ ಪಂದ್ಯಗಳಿಗೆ ಪದಾರ್ಪಣೆ ಮಾಡಿ ಆಡಿದ ಮೊದಲ 5 ಪಂದ್ಯಗಳಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದರು.

India vs England | ಡೇವಿಡ್ ಮಲಾನ್: ಟಿ-20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಚಾಂಪಿಯನ್ ಬ್ಯಾಟ್ಸ್​ಮನ್!
ಡೇವಿಡ್ ಮಲನ್
Follow us on

ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಕಳೆದ 5 ವರ್ಷಗಳ ಸಾಧನೆಯನ್ನು ಗಮನಿಸಿದ್ದೇಯಾದರೆ ಇಂಗ್ಲೆಂಡ್​ನ ಪ್ರದರ್ಶನಗಳು ಬೆರಗಾಗುವಷ್ಟು ಸುಧಾರಣೆಯಾಗಿವೆ. 2019ರ ಐಸಿಸಿ ವಿಶ್ವಕಪ್ ಗೆದ್ದಿದ್ದು ಮತ್ತು 2016ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಂತ ಪ್ರವೇಶಿದ್ದು ಇದಕ್ಕೆ ಸಾಕ್ಷಿಯಾಗಿವೆ. ಈ ಆವೃತ್ತಿಗಳಲ್ಲಿ ನಾಯಕನಾಗಿರುವ ಅಯಾನ್ ಮೋರ್ಗನ್ ಅದ್ಭುತವಾದ ರೀತಿಯಲ್ಲಿ ಟೀಮನ್ನು ಮುನ್ನಡೆಸುತ್ತಿದ್ದಾರೆ. ಈಗ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್​ ತಂಡಕ್ಕೆ ಇತ್ತೀಚಿಗೆ ಡೇವಿಡ್ ಮಲನ್ ರೂಪದಲ್ಲಿ ಒಬ್ಬ ಚಾಂಪಿಯನ್ ಬ್ಯಾಟ್ಸ್​ಮನ್​ ಸಿಕ್ಕಿದ್ದಾನೆ. ಕಿರು ಆವೃತ್ತಿ ಕ್ರಿಕೆಟ್​ನಲ್ಲಿ ಅವರು ಈಗ ವಿಶ್ವದ ನಂಬರ್ ವನ್ ಆಟಗಾರರರಾಗಿದ್ದರೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿರುವುದರಿಂದ ತಯಾರಿ ರೂಪದಲ್ಲಿ ಪ್ರವಾಸಿ ತಂಡವು ಉತ್ತಮ ಪ್ರದರ್ಶನಗಳನ್ನು ನೀಡುವ ಸಂಕಲ್ಪ ಮಾಡಿಕೊಂಡಿರುವದು ಸತ್ಯ. 5-ಪಂದ್ಯಗಳ ಟಿ20 ಸರಣಿ ಶುಕ್ರವಾರದಂದು ಅಹಮದಾಬಾದಿನಲ್ಲಿ ಶುರುವಾಗಲಿದೆ.

ಮಲಾನ್, ಟಿ-20 ಕ್ರಿಕೆಟ್​ನಲ್ಲಿ ಕಳೆದೆರಡು ವರ್ಷಗಳಿಂದ ಅತ್ಯುತ್ತಮ ಆಟವಾಡುತ್ತಿದ್ದಾರೆ ಮತ್ತು ತಮ್ಮ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 2017ರಲ್ಲಿ ಇಂಗ್ಲೆಂಡ್ ಪರ ಈ ಆವೃತ್ತಿಯ ಪಂದ್ಯಗಳಿಗೆ ಪದಾರ್ಪಣೆ ಮಾಡಿ ಆಡಿದ ಮೊದಲ 5 ಪಂದ್ಯಗಳಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದರು. ಅದಾದ ಮೇಲಿಂದ ಅವರ ಬ್ಯಾಟ್​ನಿಂದ ಮ್ಯಾಚ್​ ವಿನ್ನಿಂಗ್ ಪ್ರದರ್ಶನಗಳು ಬರುತ್ತಲೇ ಇವೆ.

ಇದುವರೆಗೆ ಆಡಿರುವ 19 ಇನ್ನಿಂಗ್ಸ್​ಗಳಲ್ಲಿ ಮಲಾನ್ ವಿಸ್ಮಯ ಮೂಡಿಸುವ 53.43 ಸರಾಸರಿಯೊಂದಿಗೆ 855 ರನ್ ಗಳಿಸಿದ್ದಾರೆ. ಈ 19 ಇನ್ನಿಂಗ್ಸ್​ನಲ್ಲಿ ಅವರು 9 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅದರರ್ಥ ತಲಾ 2 ಇನ್ನಿಂಗ್ಸ್​ಗಳಿಗೆ ಅವರು ಒಂದು ಅರ್ಧ ಶತಕ ಬಾರಿಸುತ್ತಾರೆ.

ವಿರಾಟ್ ಕೊಹ್ಲಿ

ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಮಲಾನ್ ಇದೇ ಕ್ರಮಾಂಕದಲ್ಲಿ ಆಡುವ ವಿಶ್ವದ ಇತರ ಟಾಪ್​ ಬ್ಯಾಟ್ಸ್​ಮನ್​​ಗಳಿಗಿಂತ ಉತ್ತಮ ಸರಾಸರಿ ಮತ್ತು ಸ್ಟ್ರೈಕ್ ರೇಟ್​ ಹೊಂದಿದ್ದಾರೆ. ಈ ಟಾಪ್​ ಬ್ಯಾಟ್ಸ್​ಮನ್​ಗಳಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಆಜಂ ಸಹ ಸೇರಿದ್ದಾರೆ. ಮಲಾನ್ ಮೂರನೇ ಕ್ರಮಾಂಕದಲ್ಲಿ ಆಡಿರುವ 15 ಇನ್ನಿಂಗ್ಸ್​ಗಳಿಂದ 61.50ಸರಾಸರಿ ಮತ್ತು 152.60 ಸ್ಟ್ರೈಕ್​ರೇಟ್​ನೊಂದಿಗೆ 739 ರನ್ ಗಳಿಸಿದ್ದಾರೆ. ಕೊಹ್ಲಿ 55 ಇನ್ನಿಂಗ್ಸ್​ಗಳಲ್ಲಿ 57.84 ಸರಾಸರಿ ಮತ್ತು 141. 59 ಸ್ಟ್ರೈಕ್​ರೇಟ್​ನೊಂದಿಗೆ 2,256 ರನ್ ಕಲೆಹಾಕಿದ್ದಾರೆ. ಬಾಬರ್, 3ನೇ ಕ್ರಮಾಂಕದಲ್ಲಿ ಇದುವರೆಗೆ 16 ಇನ್ನಿಂಗ್ಸ್​ ಆಡಿದ್ದು 48.89ಸರಾಸರಿ ಮತ್ತು 141.07 ಸ್ಟ್ರೈಕ್​ರೇಟ್​ನೊಂದಿಗೆ 537 ರನ್ ಬಾರಿಸಿದ್ದಾರೆ.

ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮಲಾನ್ ಅವರನ್ನು ಪಂಜಾಬ್ ಕಿಂಗ್ಸ್ ಒಂದೂವರೆ ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ತನ್ನ ಧಣಿಗಳನ್ನು ಇಂಪ್ರೆಸ್ ಮಾಡಲು ಮಲಾನ್​ಗೆ ಉತ್ತಮ ಸಂದರ್ಭ ಸಿಕ್ಕಿದೆ. ಈ ಸೀಸನ್​​ನಲ್ಲಿ ಅವರು ತಾವು ನಿರಂತರವಾಗಿ ನೀಡುತ್ತಿರುವ ಪ್ರಚಂಡ ಪ್ರದರ್ಶನಗಳನ್ನು ಮುಂದುವರೆಸಿದರೆ, 2022 ಸೀಸನ್​ಗೆ ನಡೆಯುವ ಹರಾಜಿನಲ್ಲಿ ಅವರಿಗೆ ಉತ್ತಮ ಮೊತ್ತ ಸಿಗಲಿದೆ.

ಮಲಾನ್ ವೇಗದ ಬೌಲರ್​ಗಳನ್ನು ನಿರ್ಭೀತಿಯಿಂದ ಚಚ್ಚುತ್ತಾರೆ ಅದರಲ್ಲಿ ಸಂದೇಹವೇ ಬೇಡ. ಆದರೆ, ಸ್ಪಿನ್​ಗೆ ನೆರವಾಗುವ ಭಾರತದ ಪಿಚ್​ಗಳಲ್ಲಿ ಅವರ ಬ್ಯಾಟಿಂಗ್ ಪರಾಕ್ರಮಗಳ ಸತ್ವ ಪರೀಕ್ಷೆ ನಡೆಯಲಿದೆ. ಇಲ್ಲಿನ ಪಿಚ್​ಗಳಿಗೆ ಅವರು ಹೇಗೆ ಹೊಂದಿಕೊಳ್ಳಲಿದ್ದಾರೆ ಎನ್ನುವುದು ಕಾದು ನೋಡಬೇಕಿರುವ ವಿಷಯ.

ಇದನ್ನೂ ಓದಿ: India vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್

Published On - 9:31 pm, Wed, 10 March 21