India vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್

ಇಂಗ್ಲೆಂಡ್​ನ ಥಿಂಕ್ ಟ್ಯಾಂಕ್ ತಾವು ಭಾರತದಲ್ಲಿ ಆಡುತ್ತಿರುವ ಅಂಶವನ್ನೇ ಮರೆತು ಕೇವಲ ಒಬ್ಬ ರೆಗ್ಯುಲರ್ ಸ್ಪಿನ್ನರ್​ನೊಂದಿಗೆ (ಜ್ಯಾಕ್ ಲೀಚ್) ಆಡುವ ನಿರ್ಧಾರ ತೆಗೆದುಕೊಂಡಿತು. ಹಾಗೆ ನೋಡಿದರೆ, ರೂಟ್ ಅವರು ಯಶ ಕಂಡಿದ್ದು ಅವರ ಮತ್ತು ಇಂಗ್ಲೆಂಡ್ ಟೀಮಿನ ಅದೃಷ್ಟವೆಂದೇ ಹೇಳಬೇಕು.

India vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್
ಅಕ್ಷರ್ ಪಟೇಲ್
Follow us
|

Updated on:Feb 27, 2021 | 7:11 PM

ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕುರಿತು ಮಾತಾಡುತ್ತಿದ್ದರೆ ಉಳಿದವರು ನಿಶ್ಶಬ್ದವಾಗಿ ಕೇಳಿಸಿಕೊಳ್ಳುತ್ತಾರೆ. ಯಾಕೆಂದರೆ ಅವರಾಡುವ ಮಾತು, ಮಾಡುವ ಟೀಕೆ ಹಾಗೂ ಕಾಮೆಂಟ್​ಗಿರುವ ತೂಕವೇ ಬೇರೆ. ಮಾಜಿ ಮತ್ತು ಹಾಲಿ ಆಟಗಾರರೆಲ್ಲ ಮೊಟೆರಾದ ಪಿಚ್​ ಬಗ್ಗೆ ಮಾತಾಡುತ್ತಿದ್ದರೆ ಸಚಿನ್ ಮಾತ್ರ, ಭಾರತದ ಸ್ಪಿನ್ ಬೌಲರ್​ಗಳು ಮತ್ತು ಇಂಗ್ಲೆಂಡ್ ಸ್ಕಿಪ್ಪರ್ ಜೋ ರೂಟ್ ಆ ಪಿಚ್​​ನಲ್ಲಿ ಯಾಕೆ ಯಶ ಕಂಡರು ಅನ್ನುವುದನ್ನು ವಿಶ್ಲೇಷಿಸಿದ್ದಾರೆ. ಭಾರತದ ಸ್ಪಿನ್ ತ್ರಿವಳಿ- ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ನ 20 ವಿಕೆಟ್​ಗಳ ಪೈಕಿ 19 ವಿಕೆಟ್​ಗಳನ್ನು ಕಬಳಿಸಿದರು. ಒಂದು ವಿಕೆಟ್​ ಮಾತ್ರ ವೇಗದ ಬೌಲರ್ ಇಶಾಂತ್ ಶರ್ಮ ಅವರ ಪಾಲಾಯಿತು. ಸಚಿನ್ ಅವರ ಅಭಿಪ್ರಾಯದ ಪ್ರಕಾರ ಇಂಗ್ಲೆಂಡ್ ಕೇವಲ ಒಬ್ಬ ಸ್ಪಿನ್ನರ್​ನೊಂದಿಗೆ ಕಣಕ್ಕಿಳಿದಿದ್ದು ದೊಡ್ಡ ಪ್ರಮಾದ. ಮೋಯಿನ್ ಅಲಿ ಇಲ್ಲವೇ ಡಾಮ್ ಬೆಸ್ ಅವರನ್ನು ಆಡಿಸಬೇಕಿತ್ತು ಅಂತ ಅವರು ಹೇಳಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಮೊಟೆರಾ ಟೆಸ್ಟ್ ಪಂದ್ಯದಲ್ಲಿ ಪಟೇಲ್ 11, ಅಶ್ವಿನ್ 7 ಮತ್ತು ಸುಂದರ್ 1 ವಿಕೆಟ್ ಪಡೆದರು. ಭಾರತದ ಟೀಮ್ ಮ್ಯಾನೇಜ್ಮೆಂಟ್​ಗೆ ಮೊದಲ ದಿನದಿಂದಲೇ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗುವ ಅಂಶ ಗೊತ್ತಿತ್ತು. ಆದರೆ, ಇಂಗ್ಲೆಂಡ್​ನ ಥಿಂಕ್ ಟ್ಯಾಂಕ್ ತಾವು ಭಾರತದಲ್ಲಿ ಆಡುತ್ತಿರುವ ಅಂಶವನ್ನೇ ಮರೆತು ಕೇವಲ ಒಬ್ಬ ರೆಗ್ಯುಲರ್ ಸ್ಪಿನ್ನರ್​ನೊಂದಿಗೆ (ಜ್ಯಾಕ್ ಲೀಚ್) ಆಡುವ ನಿರ್ಧಾರ ತೆಗೆದುಕೊಂಡಿತು. ಹಾಗೆ ನೋಡಿದರೆ, ರೂಟ್ ಅವರು ಯಶ ಕಂಡಿದ್ದು ಅವರ ಮತ್ತು ಇಂಗ್ಲೆಂಡ್ ಟೀಮಿನ ಅದೃಷ್ಟವೆಂದೇ ಹೇಳಬೇಕು.

2004ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯ ಕ್ರಿಕೆಟ್​ ಪ್ರೇಮಿಗಳಿಗೆ ನೆನೆಪಿರಬಹುದು. ಆ ಪಂದ್ಯದಲ್ಲಿ ಪ್ರವಾಸಿ ತಂಡದ ಮತ್ತು ರೆಗ್ಯುಲರ್ ಬೌಲರ್ ಅಗಿರದ ಮೈಕೆಲ್ ಕ್ಲಾರ್ಕ್​ ಭಾರತದ ಎರಡನೇ ಇನ್ನಿಂಗ್ಸ್​ನಲ್ಲಿ 9ರನ್​ಗಳಿಗೆ 6 ವಿಕೆಟ್​ ಪಡೆದರು. ಈ ಅಂಶವನ್ನು ಉಲ್ಲೇಖಿಸುವ ಕಾರಣವೆಂದರೆ ಇಂಥ ಪವಾಡಗಳು ಕ್ರಿಕೆಟ್​ ಮೈದಾನದಲ್ಲಿ ಅಗಾಗ ಸಂಭವಿಸುತ್ತಿರುತ್ತವೆ.

ಅಕ್ಸರ್ ಪಟೇಲ್ ಮೊಟೆರಾ ಮೈದಾನದಲ್ಲಿ ಆ ಪರಿ ಯಶಕಾಣಲು ಕಾರಣವೇನು ಅನ್ನುವುದನ್ನು ಸಚಿನ್ ವಿವರಿಸಿದ್ದಾರೆ. ಪಟೇಲ್, ಸಾಮಾನ್ಯವಾಗಿ ಎಡಗೈ ಸ್ಪಿನ್ನರ್​ಗಳು ಮಾಡುವ ಹಾಗೆ ಚೆಂಡನ್ನು ಗಾಳಿಯಲ್ಲಿ ತೂರಿ ಓವರ್​ಪಿಚ್​ ಎಸೆತ ಬೌಲ್ ಮಾಡುವ ಬದಲು ಅದಕ್ಕೆ ತದ್ವಿರುದ್ಧವಾದ ಎಸೆತಗಳನ್ನು ಬೌಲ್ ಮಾಡಿದ್ದು ಅವರ ಪ್ರಚಂಡ ಯಶಸ್ಸಿಗೆ ಕಾರಣವಾಯಿತು ಅಂತ ಸಚಿನ್ ತಮ್ಮ ಯೂಟ್ಯೂಬ್ ಚ್ಯಾನಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊವೊಂದರಲ್ಲಿ ಹೇಳಿದ್ದಾರೆ.

Jack Leach and Joe Root

ಜ್ಯಾಕ್ ಲೀಚ್ ಮತ್ತು ಜೋ ರೂಟ್

‘ಒಬ್ಬ ಎಡಗೈ ಸ್ಪಿನ್ನರ್ ಬಲಗೈ ಬ್ಯಾಟ್ಸ್​ಮನ್​ಗೆ ಬೌಲ್ ಮಾಡುವಾಗ ಸಾಮನ್ಯವಾಗಿ ಅವನು ಆಫ್​ ಸ್ಟಂಪ್​ನಾಚೆ ಚೆಂಡನ್ನು ಪಿಚ್​ ಮಾಡುವುದಿಲ್ಲ. ಅವನಿಗೆ ಎಸೆತದ ಲೆಂಗ್ತ್ ಮುಖ್ಯವಾಗಿರುತ್ತದೆ ನಿಜ ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಅವನು ಎಸೆಯಯವ ಲೈನ್. ಹಾಗಾಗಿ, ಎಡಗೈ ಸ್ಪಿನ್ನರ್ ಒಬ್ಬ ಬಲಗೈ ಬ್ಯಾಟ್ಸ್​ಮನ್​ಗೆ ಅಫ್ ಇಲ್ಲವೇ ಮಿಡ್ಲ್​ ಸ್ಟಂಪ್ ಲೈನ್​ನಲ್ಲಿ ಬೌಲ್ ಮಾಡುತ್ತಾನೆ. ಎಸೆತಗಳನ್ನು ಆಡಲೇಬಾಕಾದ ಅನಿವಾರ್ಯತೆಯನ್ನು ಬ್ಯಾಟ್ಸ್​ಮನ್​ಗೆ ಸೃಷ್ಟಿಸುತ್ತಾನೆ,’ ಎಂದು ಸಚಿನ್ ಹೇಳಿದ್ದಾರೆ.

ಒಂದು ಪಕ್ಷ ಬಾಲು ತಿರುವು ತೆಗೆದುಕೊಳ್ಳತ್ತಿದ್ದರೂ ಬ್ಯಾಟ್ಸ್​ಮನ್ ಆ ಎಸೆತಗಳನ್ನು ಆಡಲೇಬೇಕಾಗುತ್ತದೆ. ಯಾಕೆಂದರೆ ಕೆಲ ಎಸೆತಗಳು ಒಳಕ್ಕೆ ತಿರುಗಿಬಿಡುತ್ತವೆ ಇಲ್ಲವೇ ನೇರವಾಗಿ ಬಂದುಬಿಡುತ್ತವೆ. ಇಂಗ್ಲೆಂಡ್​ನ ಕೆಲ ಬ್ಯಾಟ್ಸ್​ಮನ್​ಗಳು ಪಟೇಲ ಅವರ ಎಸೆತಗಳನ್ನು ಲೈನ್​ನಿಂದ ಕೊಂಚ ಆಚೆ ಆಡಲು ಪ್ರಯತ್ನಿಸಿದರು ಇನ್ನೂ ಕೆಲವರು ಸ್ಪಿನ್ ಕವರ್​ಮಾಡಲು ಪ್ರಯತ್ನಿಸಿದರು. ಹಾಗೆ ಕವರ್ ಮಾಡಲು ಪ್ರಯತ್ನಿದವರು ಎಲ್​ ಬಿ ಬಲೆಗೆ ಬಿದ್ದರು ಇಲ್ಲವೆ ಬೌಲ್ಡ್​ ಅದರು,’ ಎಂದು ಸಚಿನ್ ಹೇಳಿದ್ದಾರೆ.

ರೂಟ್ ಪ್ರವಾಸಿ ತಂಡದ ಪರ ಅನಿರೀಕ್ಷಿತ ಹಿರೋ ಆಗಿದ್ದು ಅವರು ಪಟೇಲ್ ವಿಧಾನವನ್ನು ಅನುಸರಿಸಿದ್ದರಿಂದ ಎಂದು ಸಚಿನ್ ಹೇಳುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಥಮ ದರ್ಜೆ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಅವರು 5 ವಿಕೆಟ್​ ಪಡೆಯುವ ಸಾಧನೆ ಮಾಡಿದ್ದು. ರೂಟ್​ ಅನುಸರಿಸಿದ ಮಾರ್ಗ ಲೀಚ್​ ಬೌಲಂಗ್​ನಲ್ಲಿ ಕಾಣಲಿಲ್ಲ ಎಂದು ಲಿಟ್ಲ್ ಮಾಸ್ಟರ್ ಹೇಳುತ್ತಾರೆ.

‘ಒಬ್ಬ ಎಡಗೈ ಸ್ಪಿನ್ನರ್​ಗೆ ವೇಗ, ಪಥ ಮತ್ತು ಕೋನ ಬಹಳ ಮುಖ್ಯವಾಗುತ್ತವೆ. ಮೊಟೆರಾದ ಅಂಕಣ ಚೆಂಡನ್ನು ಗಾಳಿಯಲ್ಲಿ ತೂರಿಬಿಟ್ಟು ಬ್ಯಾಟ್ಸ್​ಮನ್​ನನ್ನು ವಂಚಿಸಿ ವಿಕೆಟ್ ಪಡೆಯುವಂಥದ್ದಾಗಿರಲಿಲ್ಲ. ಪಿಚ್ ಸ್ಪಿನ್​ ಬೌಲಿಂಗ್​ಗೆ ನೆರವಾಗುತ್ತಿದ್ದರೆ, ಬ್ಯಾಟ್ಸ್​ಮನ್​ಗೆ ಸೆಟ್ಲ್​ ಅಗಲು ಸಮಯ ಮತ್ತು ಅವಕಾಶವನ್ನು ನೀಡಬಾರದು,’ ಎಂದು ಸಚಿನ್ ಹೇಳಿದ್ದಾರೆ.

‘ಮೊಟೆರಾ ಪಿಚ್​ ಕಂಡೀಷನ್​ ಅನ್ನು ಪಟೇಲ್ ಅದ್ಭುತವಾಗಿ ಉಪಯೋಗಿಸಿಕೊಂಡರು. ನಾನಿಲ್ಲಿ ಎಡಗೈ ಸ್ಪಿನ್ನರ್​ಗಳ ಬಗ್ಗೆ ಮಾತಾಡುತ್ತಿರುವುದರಿಂದ, ಜ್ಯಾಕ್ ಲೀಚ್ ಅವರಲ್ಲಿ ಅಂಥ ಪ್ರಯತ್ನ ಕಂಡುಬರಲಿಲ್ಲ. ಅವರು ಚೆಂಡಿಗೆ ಫ್ಲೈಟ್​ ನೀಡುವ ಪ್ರಯತ್ನ ಮಾಡಿದರು. ಆದರೆ ಮೊಟೆರಾದಂಥ ಪಿಚ್​ನಲ್ಲಿ ಬಾಲನ್ನು ಗಾಳಿಯಲ್ಲಿ ತೂರಿಬಿಟ್ಟರೆ ಯಶ ಸಿಗುವುದಿಲ್ಲ,’ ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿIndia vs England Test Series | ಪಿಚ್​ ನಿರ್ದಿಷ್ಟವಾಗಿ ಹೀಗೆಯೇ ತಯಾರಿಸಬೇಕೆಂಬ ನಿಯಮ ಎಲ್ಲಿದೆ: ಜೆಫ್ರಿ ಬಾಯ್ಕಾಟ್

Published On - 4:32 pm, Sat, 27 February 21