ಅಶ್ವಿನ್, ಕುಂಬ್ಳೆ, ಕಪಿಲ್.. ಈ ಮೂವರಲ್ಲಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಯಾರು? ಅಂಕಿ-ಅಂಶ ಹೇಳುತ್ತಿರುವುದೇನು?
ಅಶ್ವಿನ್ ಇದುವರೆಗೆ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 45 ಪಂದ್ಯಗಳನ್ನು ಭಾರತ ಗೆದ್ದಿದೆ. ಅನಿಲ್ ಆಡಿರುವ 132 ಟೆಸ್ಟ್ ಪಂದ್ಯಗಳಲ್ಲಿ 43 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಕಪಿಲ್ ದೇವ್ ಆಡಿರುವ 131 ಟೆಸ್ಟ್ ಪಂದ್ಯಗಳಲ್ಲಿ ಭಾರತ 24 ಪಂದ್ಯಗಳಲ್ಲಿ ಜಯಗಳಿಸಿದೆ.
ಅಹಮದಾಬಾದ್: 3ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ 400 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಅಂದಿನಿಂದ, ಕ್ರಿಕೆಟ್ ಜಗತ್ತಿನಲ್ಲಿ ಒಂದು ಪ್ರಶ್ನೆ ಹರಿದಾಡುತ್ತಿದೆ. ಅದ್ಯಾವುದೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಯಾರು ಎಂಬುದು. ಈ ಸಾಲಿನಲ್ಲಿ ಅನಿಲ್ ಕುಂಬ್ಳೆ, ಕಪಿಲ್ ದೇವ್ ಮತ್ತು ಅಶ್ವಿನ್ ಅವರ ಹೆಸರುಗಳ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಚೆನ್ನೈ ಟೆಸ್ಟ್‌ನಲ್ಲಿ ಅಶ್ವಿನ್ ಎಂಟು ವಿಕೆಟ್ ಗಳಿಸಿ ಭಾರತದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು 1-1 ರಿಂದ ಸಮಮಾಡಿಕೊಂಡಿತು. ಈ ಟೆಸ್ಟ್ನ ಜಯದ ಪಾಲು ಆದಷ್ಟು ಅಶ್ವಿನ್‌ಗೆ ಸಲ್ಲುತ್ತದೆ. 34 ವರ್ಷದ ಅಶ್ವಿನ್ ಹಲವು ಬಾರಿ ಭಾರತದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಶ್ವಿನ್ ಕೇವಲ ಬೌಲಿಂಗ್‌ನಲ್ಲಿ ಅಲ್ಲದೆ ಬ್ಯಾಟಿಂಗ್ನಲ್ಲೂ ತಮ್ಮ ಕರಾಮತ್ತು ತೋರಿದ್ದಾರೆ.
43 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ.. ಅಶ್ವಿನ್ ಇದುವರೆಗೆ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 45 ಪಂದ್ಯಗಳನ್ನು ಭಾರತ ಗೆದ್ದಿದೆ. ಅನಿಲ್ ಕುಂಬ್ಳೆ ಅವರ ವೃತ್ತಿಜೀವನವನ್ನು ನೋಡಿದರೆ, ಅನಿಲ್ ಆಡಿರುವ 132 ಟೆಸ್ಟ್ ಪಂದ್ಯಗಳಲ್ಲಿ 43 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಕಪಿಲ್ ದೇವ್ ಆಡಿರುವ 131 ಟೆಸ್ಟ್ ಪಂದ್ಯಗಳಲ್ಲಿ ಭಾರತ 24 ಪಂದ್ಯಗಳಲ್ಲಿ ಜಯಗಳಿಸಿದೆ. ಹೀಗಾಗಿ ಅಂಕಿ ಅಂಶ ಗಮನಿಸಿದರೆ ಕುಂಬ್ಳೆ ಮತ್ತು ಕಪಿಲ್ ಇಬ್ಬರಿಗಿಂತ ಅಶ್ವಿನ್ ಆಡಿದ ಪಂದ್ಯಗಳಲ್ಲೇ ಟೀಂ ಇಂಡಿಯಾಕ್ಕೆ ಹೆಚ್ಚಿನ ಗೆಲುವು ಸಿಕ್ಕಿದೆ.
ವಿದೇಶಿ ನೆಲದಲ್ಲಿನ ಟೆಸ್ಟ್ ಪಂದ್ಯಗಳ ಅಂಕಿ-ಅಂಶಗಳನ್ನು ನೋಡಿದರೆ, ವಿದೇಶಿ ನೆಲದಲ್ಲಿ ಅಶ್ವಿನ್ ಆಡಿದ 10 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದಿದ್ದರೆ, ಆ ಪಂದ್ಯಗಳಲ್ಲಿ ಅಶ್ವಿನ್ 50 ವಿಕೆಟ್ ಪಡೆದಿದ್ದಾರೆ. ಈ ಪೈಕಿ ಕಪಿಲ್ ದೇವ್ ಅವರ ಖಾತೆಯಲ್ಲಿ ಕೇವಲ ನಾಲ್ಕು ಗೆಲುವುಗಳಿವೆ. ಅದೇ ಸಮಯದಲ್ಲಿ ಕುಂಬ್ಳೆ ಆಡಿದ 15 ಸಾಗರೋತ್ತರ ಟೆಸ್ಟ್ ಪಂದ್ಯಗಳಲ್ಲಿ ಭಾರತ ಜಯಗಳಿಸಿದೆ. ಆ ಪಂದ್ಯಗಳಲ್ಲಿ ಅನಿಲ್ 80 ವಿಕೆಟ್ ಪಡೆದಿದ್ದಾರೆ. ಹಾಗೆಯೇ, ಬೌಲಿಂಗ್‌ನಲ್ಲಿ ಅಶ್ವಿನ್ ಅವರ ಸ್ಟ್ರೈಕ್ ರೇಟ್ ಭಾರತದ ಇತರ ಬೌಲರ್ಗಳಿಗಿಂತ ಉತ್ತಮವಾಗಿದೆ. ಪ್ರತಿ 53 ಎಸೆತಗಳಿಗೆ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ. ಕುಂಬ್ಳೆ 65.9 ಸರಾಸರಿ ಎಸೆತಗಳಲ್ಲಿ 1 ವಿಕೆಟ್ ಪಡೆದರೆ, ಹರ್ಭಜನ್ 64.80 ಮತ್ತು ಕಪಿಲ್ 63.9 ಸರಾಸರಿ ಎಸೆತಗಳ ನಂತರ ಒಂದು ವಿಕೆಟ್ ಪಡೆದಿದ್ದಾರೆ.
ಅಶ್ವಿನ್, ಟೆಸ್ಟ್‌ನಲ್ಲಿ ಕುಂಬ್ಳೆ-ಹರ್ಭಜನ್ ಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ ಅಶ್ವಿನ್ 1 ವಿಕೆಟ್ ಪಡೆಯಲು ಸರಾಸರಿ 25.27 ರನ್ ನೀಡಿದ್ದಾರೆ. ಹಾಗೆಯೇ ಕುಂಬ್ಳೆ ಸರಾಸರಿ 29.65 ರನ್ ಮತ್ತು ಹರ್ಭಜನ್ ಸರಾಸರಿ 32.46 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ ಐದಕ್ಕಿಂತ ಹೆಚ್ಚು ವಿಕೆಟ್ ತೆಗೆದ ಟೀಂ ಇಂಡಿಯಾದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ . ಕುಂಬ್ಳೆ ಟೆಸ್ಟ್‌ನಲ್ಲಿ 5 ಕ್ಕಿಂತ ಹೆಚ್ಚ ವಿಕೆಟ್‌ಗಳನ್ನು 35 ಬಾರಿ ತೆಗೆದಿದ್ದರೆ, ಕುಂಬ್ಳೆ ನಂತರದ ಸ್ಥಾನದಲ್ಲಿ 29 ಬಾರಿ ಐದು ವಿಕೆಟ್ ತೆಗೆದೆ ಅಶ್ವಿನ್ ಇದ್ದಾರೆ.
ಪ್ರಸ್ತುತ, ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದ ಬೌಲರ್ಗಳಲ್ಲಿ ಅಶ್ವಿನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಖಾತೆಯಲ್ಲಿ 401 ವಿಕೆಟ್ಗಳಿವೆ. ಅವರ ನಂತರದ 3ನೇ ಸ್ಥಾನದಲ್ಲಿ ಹರ್ಭಜನ್ (417), 2ನೇ ಸ್ಥಾನದಲ್ಲಿ ಕಪಿಲ್ ದೇವ್ (434) ಮತ್ತು ಮೊದಲನೇ ಸ್ಥಾನದಲ್ಲಿ ಕುಂಬ್ಳೆ (619) ಇದ್ದಾರೆ. ಅಲ್ಲದೆ ಅಶ್ವಿನ್ ಏನಾದರು 100 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾದರೆ, ಅವರು 500 ವಿಕೆಟ್‌ಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.
ಕಪಿಲ್ಗೆ ಈ ತಂತ್ರಜ್ಞಾನ ನೆರವಾಗಲಿಲ್ಲ.. ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆಯುವಲ್ಲಿ DRS ಹಾಗೂ 3ನೇ ಅಂಪೈರ್ ಅವರ ಪಾತ್ರ ಹೆಚ್ಚಿದೆ. ಆದರೆ ಕ್ರಿಕೆಟ್ ಆರಂಭದಲ್ಲಿ ಕೆಲವೊಂದು ನಿರ್ಣಯಗಳನ್ನು ನೀಡಲು 3ನೇ ಅಂಪೈರ್ ಆಗಲಿ ಅಥವಾ DRS ಆಗಲಿ, ಯಾವ ತಂತ್ರಜ್ಞಾನವು ಇರಲಿಲ್ಲ. ಹೀಗಾಗಿ ಕ್ರಿಕೆಟ್‌ನಲ್ಲಿ ಈ ಯಾವುದೇ ತಂತ್ರಜ್ಞಾನ ಇರದ ಕಾರಣ ಕಪಿಲ್, ಹೆಚ್ಚು ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ. 1992 ನವೆಂಬರ್, ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 3ನೇ ಅಂಪೈರನ್ನು ಪರಿಚಯಿಸಲಾಯಿತು.
ಅದು ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ 3ನೇ ಅಂಪೈರ್ ಚಾಲನೆಗೆ ಬಂದರು. ವಿಶೇಷವೆಂದರೆ 3ನೇ ಅಂಪೈರ್ ನಿರ್ಧಾರದಿಂದ ಔಟಾದ ಮೊದಲ ಆಟಗಾರನೆಂದರೆ ಅದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಇನ್ನೊಂದು ಸಂಗತಿಯೆಂದರೆ 3ನೇ ಅಂಪೈರ್ ಬರುವ ವೇಳೆಗೆ ಸಾಕಷ್ಟು ಕ್ರಿಕೆಟ್ ಆಡಿದ್ದ ಕಪಿಲ್ 1994 ರಲ್ಲಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಹೀಗಾಗಿ ಕಪಿಲ್ಗೆ 3ನೇ ಅಂಪೈರ್ ಅವರ ಉಪಯೋಗ ಹೆಚ್ಚಾಗಿ ದೊರಕದಿರುವುದು ಸಹ ಸಾಧನೆಗೆ ಸ್ವಲ್ಪ ಹಿನ್ನಡೆ ಉಂಟುಮಾಡಿತು.
ಕುಂಬ್ಳೆ ಅವಧಿ.. ಅಂತರಾಷ್ಟ್ರೀಯ ಕ್ರಿಕೆಟ್ಗೆ ಕುಂಬ್ಲೆ ಕಾಲಿರಿಸಿದ 2 ವರ್ಷಗಳ ಬಳಿಕ ಕ್ರಿಕೆಟ್‌ನಲ್ಲಿ 3ನೇ ಅಂಪೈರನ್ನು ಪರಿಚಯಿಸಲಾಯಿತು. ಇದರಿಂದ ಕುಂಬ್ಳೆಗೆ ಅಲ್ಪ ಪ್ರಮಾಣದ ಯಶಸ್ಸು ಸಿಗಲು 3ನೇ ಅಂಪೈರ್ ತಂತ್ರಜ್ಞಾನ ಹೆಚ್ಚು ಸಹಕಾರಿಯಾಯಿತು. ಆದರೆ DRS ತಂತ್ರಜ್ಞಾನ ಬರುವ ವೇಳೆಗೆ ಕುಂಬ್ಳೆ ಕ್ರಿಕೆಟ್ ಕರಿಯರ್ ಮುಗಿದು ಹೋಗಿತ್ತು. 2008 ರಲ್ಲಿ ಕುಂಬ್ಳೆ ತಮ್ಮ ಅಂತಿಮ ಟೆಸ್ಟ್ ಆಡಿದ್ದರು. ಆದರೆ DRS ತಂತ್ರಜ್ಞಾನ 2008 ರಲ್ಲಿ ಟೆಸ್ಟ್ ಪಂದ್ಯಗಳ ಮೂಲಕ ಕ್ರಿಕೆಟ್ಗೆ ಕಾಲಿರಿಸಿತು. ಹೀಗಾಗಿ ಕುಂಬ್ಳೆ ವಿದಾಯದ ಬಳಿಕ ಈ ತಂತ್ರಜ್ಞಾನ ಹೆಚ್ಚು ಬಳಕೆಗೆ ಬಂದಿದ್ದು, ಕುಂಬ್ಳೆ ಸಾಧನೆಗೆ ಹೆಚ್ಚು ಸಹಕಾರಿಯಾಗಲಿಲ್ಲ.
DRS ಅಶ್ವಿನ್ ಯಶಸ್ಸಿಗೆ ಕಾರಣವಾಯಿತ.. ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುವಷ್ಟರಲ್ಲಿ ಕ್ರಿಕೆಟ್ಗೆ 3ನೇ ಅಂಪೈರ್ ಹಾಗೂ DRS ತಂತ್ರಜ್ಞಾನವನ್ನ ಅಳವಡಿಸಲಾಗಿತ್ತು. ಹೀಗಾಗಿ ಅಶ್ವಿನ್ ಅವರ ಈ ಸಾಧನೆಯಲ್ಲಿ ಈ ಎರಡು ಆಧುನಿಕ ತಂತ್ರಜ್ಞಾನ ಸಾಕಷ್ಟು ಸಹಾಯಕ್ಕೆ ಬಂದಿದೆ. ಹಾಗಂದ ಮಾತ್ರಕ್ಕೆ, ಅಶ್ವಿನ್ ಅವರ ಈ ಸಾಧನೆಯಲ್ಲಿ ಕೇವಲ ತಂತ್ರಜ್ಞಾನ ಮಾತ್ರ ಕೆಲಸ ಮಾಡಿಲ್ಲ. ಬದಲಿಗೆ ಅಶ್ವಿನ್ ಅವರ ಚಾಕಚಕ್ಯತೆ, ಎದುರಾಳಿ ತಂಡದ ಆಟಗಾರನ ನ್ಯೂನತೆಯನ್ನ ಅರ್ಥ ಮಾಡಿಕೊಳ್ಳುವಲ್ಲಿ ಅಶ್ವಿನ್ ಹೆಣೆಯುವ ತಂತ್ರಗಳು ಮತ್ತು ಕ್ರಿಕೆಟ್ ಮೇಲಿರುವ ಆಸಕ್ತಿ ಅಶ್ವಿನ್ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
Published On - 4:31 pm, Sun, 28 February 21