‘ಕೊನೆಯ ಪ್ರಯಾಣವನ್ನು ತಪ್ಪಿಸಿಕೊಳ್ಳಲಾರೆ’; ಟೀ ಟೇಬಲ್​ನಲ್ಲಿಯೇ ಧೋನಿಯ ಮಹತ್ವದ ನಿರ್ಧಾರ..!

| Updated By: ಪೃಥ್ವಿಶಂಕರ

Updated on: Jan 13, 2023 | 6:08 PM

MS Dhoni: ಈ ವೇಳೆ ಪಂತ್ ಹಿಂದಿಯಲ್ಲಿ, ಭೈಯಾ ಕೆಲವು ಆಟಗಾರರು ಲಂಡನ್‌ಗೆ ತಾವಾಗಿಯೇ ಹೋಗಲು ಯೋಜಿಸುತ್ತಿದ್ದಾರೆ, ನೀವು ಬರುತ್ತೀರಾ? ಎಂದು ಧೋನಿ ಬಳಿ ಕೇಳಿದರು. ಇದಕ್ಕೆ ಉತ್ತರಿಸಿದ ಧೋನಿ, ಇಲ್ಲ ರಿಷಬ್, ನಾನು ತಂಡದೊಂದಿಗೆ ನನ್ನ ಕೊನೆಯ ಬಸ್ ಪ್ರಯಾಣವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದರು.

‘ಕೊನೆಯ ಪ್ರಯಾಣವನ್ನು ತಪ್ಪಿಸಿಕೊಳ್ಳಲಾರೆ’; ಟೀ ಟೇಬಲ್​ನಲ್ಲಿಯೇ ಧೋನಿಯ ಮಹತ್ವದ ನಿರ್ಧಾರ..!
ಎಂಎಸ್ ಧೋನಿ
Follow us on

ಮಹೇಂದ್ರ ಸಿಂಗ್ ಧೋನಿ (Mahendra Singh Dhoni)… ಟೀಂ ಇಂಡಿಯಾ ಎಂದಿಗೂ ಮರೆಯದ ಸವ್ಯಸಾಚಿ ಕ್ರಿಕೆಟಿಗ. ಅದಕ್ಕಿಂತಲೂ ಒಬ್ಬ ಅದ್ಭುತ ತಂತ್ರಗಾರಿಕೆಯ ನಾಯಕ. ಮತ್ತೊಂದು ವಿಶ್ವಕಪ್​ಗಾಗಿ (World Cup) ವರ್ಷಗಳಿಂದ ಕಾಯುತ್ತಾ ಕುಳಿತಿದ್ದ ಭಾರತಕ್ಕೆ ಒಂದಲ್ಲ ಎಂಬಂತೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹಾನ್ ನಾಯಕ ಧೋನಿ. ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ದ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನ ವಿದಾಯ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ಆಗಿ ಹೋಯಿತು. ಇದ್ದಕ್ಕಿದಂತೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ನಿವೃತ್ತಿಯನ್ನು ಘೋಷಿಸಿದ ಧೋನಿ ಸೈಲೆಂಟ್ ಆಗಿಬಿಟ್ಟರು. ಆದರೆ ಒಬ್ಬ ಮಹೋನ್ನತ ನಾಯಕನ ವಿದಾಯದ ಬಗ್ಗೆಗಿನ ಚರ್ಚೆಗಳು ಮಾತ್ರ ಈಗಲೂ ನಡೆಯುತ್ತಲೆ ಇರುತ್ತವೆ. ಇದೀಗ ಅಂತಹದ್ದೆ ಹೊಸ ಸುದ್ದಿಯೊಂದು ಧೋನಿ ವಿದಾಯದ ಬಗ್ಗೆ ಹೊರಬಿದ್ದಿದೆ.

ವಾಸ್ತವವಾಗಿ ಆಗಸ್ಟ್ 15, 2020 ರಂದು ಧೋನಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ ಧೋನಿ 13 ತಿಂಗಳ ಹಿಂದೆಯೇ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ವಿಷಯವನ್ನು ಟೀಂ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಮುಗಿಯುವ ಮುನ್ನವೇ ಧೋನಿ ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂದು ನಿರ್ಧರಿಸಿದ್ದರು ಎಂಬ ವಿಚಾರವನ್ನು ಶ್ರೀಧರ್ ತಮ್ಮ’ಕೋಚಿಂಗ್ ಬಿಯಾಂಡ್ ಮೈ ಡೇಸ್ ವಿಥ್ ದಿ ಇಂಡಿಯನ್ ಕ್ರಿಕೆಟ್’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

MS Dhoni: ಮಂಗಳೂರಿನಲ್ಲಿ ಎಂಎಸ್ ಧೋನಿ..! ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಕೂಲ್

ನಿವೃತ್ತಿಯ ಸುಳಿವು ನೀಡಿದ್ದ ಧೋನಿ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಮೀಸಲು ದಿನದಂದು, ಧೋನಿ ನಿವೃತ್ತಿಯಾಗಲಿರುವ ಬಗ್ಗೆ ಸುಳಿವು ನೀಡಿದ್ದರು ಎಂಬುದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖ ಮಾಡಿರುವ ಶ್ರೀಧರ್, ‘‘ನಿಗದಿ ಪಡಿಸಿದ ದಿನದಂದು ಮಳೆ ಬಂದಿದ್ದರಿಂದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಮೀಸಲು ದಿನದಂದು ತನ್ನ ಪಾಲಿಗೆ ಉಳಿದ ಓವರ್​ಗಳನ್ನು ಆಡಬೇಕಾಗಿತ್ತು. ಅದರ ನಂತರ ನಾವು ನಮ್ಮ ಇನ್ನಿಂಗ್ಸ್ ಪ್ರಾರಂಭಿಸಬೇಕಾಗಿತ್ತು. ಅಂದು ಪಂದ್ಯ ಬೇಗ ಆರಂಭವಾಗಬೇಕಿತ್ತು. ಈ ವೇಳೆ ನಾನು ಬ್ರೇಕ್‌ಫಾಸ್ಟ್ ಹಾಲ್‌ನಲ್ಲಿ ಟೀ ಕುಡಿಯುತ್ತ ಕುಳಿತಿದ್ದೆ. ಈ ವೇಳೆಗೆ ಅಲ್ಲಿಗೆ ಬಂದ ರಿಷಬ್ ಪಂತ್ ಹಾಗೂ ಧೋನಿ ಟೀ ತೆಗೆದುಕೊಂಡು ನನ್ನ ಬಳಿ ಬಂದರು.

ಈ ವೇಳೆ ಪಂತ್ ಹಿಂದಿಯಲ್ಲಿ, ಭೈಯಾ ಕೆಲವು ಆಟಗಾರರು ಲಂಡನ್‌ಗೆ ತಾವಾಗಿಯೇ ಹೋಗಲು ಯೋಜಿಸುತ್ತಿದ್ದಾರೆ, ನೀವು ಬರುತ್ತೀರಾ? ಎಂದು ಧೋನಿ ಬಳಿ ಕೇಳಿದರು. ಇದಕ್ಕೆ ಉತ್ತರಿಸಿದ ಧೋನಿ, ಇಲ್ಲ ರಿಷಬ್, ನಾನು ತಂಡದೊಂದಿಗೆ ನನ್ನ ಕೊನೆಯ ಬಸ್ ಪ್ರಯಾಣವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳುತ್ತಾ ತಮ್ಮ ನಿವೃತ್ತಿಯ ಸುಳಿವನ್ನು ಆಗಲೇ ನೀಡಿದ್ದರು’’ ಎಂಬುದನ್ನು ಶ್ರೀಧರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಈ ವಿಷಯವನ್ನು ನಾನು ಯಾರಿಗೂ ಹೇಳಲಿಲ್ಲ

ಪಂತ್‌ಗೆ ಧೋನಿ ಏನು ಹೇಳಿದರೋ ಅದು ಅದೇ ಟೇಬಲ್‌ನಲ್ಲಿಯೇ ಉಳಿಯಿತು. ಧೋನಿ ಮೇಲಿನ ಗೌರವದಿಂದ ಈ ವಿಷಯವನ್ನು ನಾನು ಯಾರಿಗೂ ಹೇಳಿಲ್ಲ. ಧೋನಿ ನನ್ನನ್ನು ನಂಬಿ, ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದರು. ಹೀಗಾಗಿ ನಾನು ಎಲ್ಲಿಯೂ ಈ ಬಗ್ಗೆ ಮಾತನಾಡುವಂತಿರಲಿಲ್ಲ. ಹಾಗಾಗಿ ನಾನು ರವಿಶಾಸ್ತ್ರಿಗೆ ಅಥವಾ ಭರತ್ ಅರುಣ್ ಅವರಿಗೂ ಈ ವಿಷಯವನ್ನು ಹೇಳಿಲ್ಲ. ಇದನ್ನು ಸ್ವತಃ ನನ್ನ ಹೆಂಡತಿಗೂ ಹೇಳಿರಲಿಲ್ಲ ಎಂದು ಶ್ರೀಧರ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Fri, 13 January 23