IND vs NZ: ಪೃಥ್ವಿ ಇನ್, ಸಂಜು ಮತ್ತೆ ಔಟ್! ರಾಹುಲ್- ಅಕ್ಷರ್ಗೆ ವಿಶ್ರಾಂತಿ; ಕಿವೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ
IND vs NZ: ಕಿವೀಸ್ ವಿರುದ್ಧದ ಸರಣಿಗೆ ಸಂಜು ಫಿಟ್ ಆಗಿ ತಂಡಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಪ್ರಕಟಗೊಂಡಿರುವ ತಂಡದಲ್ಲಿ ಸಂಜು ಹೆಸರಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾವನ್ನು (India vs New Zealand) ಪ್ರಕಟಿಸಿರುವ ಬಿಸಿಸಿಐ (BCCI) ತಂಡದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಒಂದೂವರೆ ವರ್ಷಗಳ ಕಾಲ ತಂಡದಿಂದ ಹೊರಗಿದ್ದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ಕೊನೆಗೂ ತಂಡಕ್ಕೆ ಮರಳಿರುವುದು ದೊಡ್ಡ ಸುದ್ದಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯ ಹೊರತಾಗಿ, ಕಿವೀಸ್ ಸರಣಿ ಬಳಿಕ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 18 ರಿಂದ ಪ್ರಾರಂಭವಾಗಲಿದೆ. ನಂತರ ಮೂರು ಪಂದ್ಯಗಳ ಟಿ20 ಸರಣಿಯು ಸಹ ಜನವರಿ 27 ರಿಂದ ನಡೆಯಲಿದೆ. ಕೌಟುಂಬಿಕ ಕಾರಣಗಳಿಂದಾಗಿ ಈ ಎರಡೂ ಸರಣಿಗಳಿಂದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಅಲಭ್ಯತೆಯ ಲಾಭವನ್ನು ಇತರ ಆಟಗಾರರು ಪಡೆದುಕೊಂಡಿದ್ದಾರೆ.
IND vs SL: ಶ್ರೀಲಂಕಾ ಎದುರು ಭಾರತವೇ ಬಲಿಷ್ಠ; ಅಂಕಿ ಅಂಶ ಹೇಳುತ್ತಿದೆ ಟೀಂ ಇಂಡಿಯಾದ ಗೆಲುವಿನ ಕಥೆ
ಒಂದೂವರೆ ವರ್ಷದ ನಂತರ ಪೃಥ್ವಿ ಶಾಗೆ ಅವಕಾಶ
ಪ್ರಕಟವಾಗಿರುವ ಟಿ20 ತಂಡದಲ್ಲಿ ಕಾಣಿಸುವ ದೊಡ್ಡ ಹೆಸರೆಂದರೆ ಅದು ಪೃಥ್ವಿ ಶಾ . ಪೃಥ್ವಿ ಜುಲೈ 2021 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ನಂತರ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಮೊದಲ ಎಸೆತದಲ್ಲಿಯೇ ಔಟಾಗಿದ್ದರು. ಅಂದಿನಿಂದ ಮತ್ತೆ ಪೃಥ್ವಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದಾಗ್ಯೂ, ಅಂದಿನಿಂದ ಪೃಥ್ವಿ ಐಪಿಎಲ್ ಹೊರತುಪಡಿಸಿ ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸಿದ್ದರು. ಇತ್ತೀಚೆಗೆ, ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಪೃಥ್ವಿ ಬಿರುಸಿನ 379 ರನ್ ಸಿಡಿಸಿ ಬಿಸಿಸಿಐ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಅದ್ಭುತ ಪ್ರದರ್ಶನದ ಆದಾರದ ಮೇಲೆ ಪೃಥ್ವಿಗೆ ಟೀಂ ಇಂಡಿಯಾದ ಕದ ಮತ್ತೊಮ್ಮೆ ತೆರೆದಿದೆ.
ಸ್ಯಾಮ್ಸನ್ ಡ್ರಾಪ್ ಅಥವಾ ಇಂಜುರಿ?
ಹಾಗೆಯೇ ಆಯ್ಕೆಯಾಗಿರುವ ತಂಡದಲ್ಲಿ ಮತ್ತೊಂದು ಅಚ್ಚರಿಯೆಂದರೆ ಅದು ಸಂಜು ಸ್ಯಾಮ್ಸನ್ ಹೆಸರಿಲ್ಲದೆ ಇರುವುದು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದರು. ಇದರಿಂದಾಗಿ ಅವರು ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಏಕದಿನ ಸರಣಿಗೂ ಆಯ್ಕೆಯಾಗಿರಲಿಲ್ಲ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಗೆ ಸಂಜು ಫಿಟ್ ಆಗಿ ತಂಡಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಪ್ರಕಟಗೊಂಡಿರುವ ತಂಡದಲ್ಲಿ ಸಂಜು ಹೆಸರಿಲ್ಲ. ಇತ್ತ ಬಿಸಿಸಿಐ ಕೂಡ ಸ್ಯಾಮ್ಸನ್ ಗಾಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ಸಂಜು ಅವರನ್ನು ತಂಡದಿಂದ ಕೈಬಿಡಲಾಗಿದೆಯೇ ಅಥವಾ ಅವರಿನ್ನು ಗಾಯದಿಂದ ಚೇತರಿಸಿಕೊಂಡಿಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅದೇ ಸಮಯದಲ್ಲಿ, ಹೊಸ ಆಯ್ಕೆ ಸಮಿತಿಯು ಹೈದರಾಬಾದ್‌ನ ವಿಕೆಟ್‌ಕೀಪರ್ ಕೆಎಸ್ ಭರತ್‌ಗೆ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಿದೆ. ಟೆಸ್ಟ್ ಸರಣಿಗೂ ಭರತ್ ಪ್ರಮುಖ ವಿಕೆಟ್ ಕೀಪರ್ ಆಗಿ ತಂಡ ಸೇರಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಜಿತೇಶ್ ಅವರನ್ನು ಟಿ 20 ಸರಣಿಗೆ ಇಶಾನ್ ಅವರ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಆದರೆ, ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ಮತ್ತೆ ಸ್ಥಾನ ಸಿಗಲಿಲ್ಲ.
India’s squad for NZ T20Is: Hardik Pandya (C), Suryakumar Yadav (vc), Ishan Kishan (wk), R Gaikwad, Shubman Gill, Deepak Hooda, Rahul Tripathi, Jitesh Sharma (wk), Washington Sundar, Kuldeep Yadav, Y Chahal, Arshdeep Singh, Umran Malik, Shivam Mavi, Prithvi Shaw, Mukesh Kumar
— BCCI (@BCCI) January 13, 2023
ಕಿವೀಸ್ ವಿರುದ್ಧ ಭಾರತದ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಕಿವೀಸ್ ವಿರುದ್ಧ ಭಾರತ ಟಿ20 ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Sat, 14 January 23
