ಚುನಾವಣೆಗೂ ಮುನ್ನವೇ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್​ಸಿಎ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳ ಡಿಸೆಂಬರ್ 7ರಂದು ಅಧ್ಯಕ್ಷ ಸ್ಥಾನ್ಕಕೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್​ ಸೂಚಿಸಿತ್ತು. ಆದ್ರೆ, ಚುನಾವಣೆಗೂ ಮುನ್ನವೇ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಗೂ ಮುನ್ನವೇ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
Venkatesh Prasad

Updated on: Nov 24, 2025 | 9:05 PM

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್​ಸಿಎ) ಅಧ್ಯಕ್ಷರಾಗಿ ಟೀಮ್‌ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್  (Venkatesh Prasad) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಎಸ್​ಸಿಎ ಅಧ್ಯಕ್ಷ ಸ್ಥಾನಕ್ಕೆ ವಿರೋಧಿ ಬಣದ ಅಭ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ​ಚುನಾವಣೆಗೂ ಮುನ್ನವೇ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.

ಡಿಸೆಂಬರ್ 7ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಹೀಗಾಗಿ ಚುನಾವಣಾ ಪ್ರಕ್ರಿಯೆ ಶುರುವಾಗಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ವಿರೋಧಿ ಬಣದಿಂದ ಶಾಂತಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದ್ರೆ,  ಇಂದು (ನವೆಂಬರ್ 24) ನಡೆದ ನಾಮಪತ್ರ ಪರಿಶೀಲನೆ ವೇಳೆ ಶಾಂತಕುಮಾರ್ ಸಲ್ಲಿಸಿದ್ದ ನಾಮಪತ್ರ ಅಸಿಂಧುಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಸ್ಪರ್ಧಿ ಯಾರು ಇಲ್ಲದ ಕಾರಣ ಕೆಎಸ್​​ಸಿಎ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 30ಕ್ಕೆ ಚುನಾವಣೆ ಮುಂದೂಡಿ ಎಂದು ಚುನಾವಣಾಧಿಕಾರಿ ಬರೆದಿದ್ದ ಪತ್ರ ಪ್ರಶ್ನಿಸಿ KSCA, B.K.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆಗೆ ನಿರ್ದೇಶನ ನೀಡಿತ್ತು. ಹಾಲಿ ಬೈಲಾ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರವೇ ಚುನಾವಣೆ ನಡೆಸಲು ಆದೇಶಿಸಿತ್ತು.

12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ

ವೆಂಕಟೇಶ್‌ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್‌ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್‌ ಶ್ರೀನಾಥ್‌ ಕಾರ್ಯದರ್ಶಿಯಾಗಿದ್ದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ‌ 12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ ವಾಪಸ್ಸಾಗಿದ್ದಾರೆ.

1994ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೆಂಕಿ, ಟೀಂ ಇಂಡಿಯಾದ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 33 ಟೆಸ್ಟ್ ಪಂದ್ಯದಿಂದ 96 ವಿಕೆಟ್ ಕಬಳಿಸಿದ್ದರೆ, 161 ಏಕದಿನ ಪಂದ್ಯದಿಂದ 196 ವಿಕೆಟ್ ಉರುಳಿಸಿದ್ದಾರೆ.