ಸದ್ಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದ್ದು, ಗೆಲುವಿನ ಸನಿಹದಲ್ಲಿದೆ. ಈ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಆಘಾತ ಎದುರಾಗಿದ್ದು, ತಂಡದ ಪರ ಸುಮಾರು 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಮಾಜಿ ಅನುಭವಿ ಆಟಗಾರನನ್ನು ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ವಿಭಾಗವು ಮಾಜಿ ವೇಗದ ಬೌಲರ್ ಲೊನ್ವಾಹೊ ತ್ಸೊಟ್ಸೊಬೆ ಸೇರಿದಂತೆ ಇನ್ನೂ ಇಬ್ಬರು ಮಾಜಿ ಆಟಗಾರರನ್ನು ಬಂಧಿಸಿದೆ.
ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ಆದ್ಯತಾ ಅಪರಾಧ ತನಿಖಾ ನಿರ್ದೇಶನಾಲಯ (ಡಿಪಿಸಿಐ) ಒಂಬತ್ತು ವರ್ಷಗಳ ಹಿಂದಿನ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಈ ಮೂವರು ಮಾಜಿ ಕ್ರಿಕೆಟಿಗರನ್ನು ಬಂಧಿಸಿದೆ. ಸೋತ್ಸೋಬೆ ಹೊರತಾಗಿ, ಬಂಧಿತ ಆಟಗಾರರಲ್ಲಿ ತಮ್ಸಂಕಾ ಸೊಲೆಕಿಲೆ ಮತ್ತು ಮಭಾಲಟಿ ಕೂಡ ಸೇರಿದ್ದಾರೆ. ಈ ಪೈಕಿ ಸೊಲೆಕಿಲ್ ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಮಭಾಲಟಿ ದಕ್ಷಿಣ ಆಫ್ರಿಕಾ ಪರ ಒಂದೇ ಒಂದು ಪಂದ್ಯವನ್ನಾಡದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ 129 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
ಈ ಮೂವರ ಬಂಧನವು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಳೆಯ ಟಿ20 ಟೂರ್ನಮೆಂಟ್ ‘ರಾಮ್ ಸ್ಲಾಮ್’ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದೆ. ಈ ಮೂವರೂ ಪಂದ್ಯಾವಳಿಯಲ್ಲಿ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಮೂವರು ಆಟಗಾರರನ್ನು ಅಮಾನತುಗೊಳಿಸಿತು. ವರದಿಗಳ ಪ್ರಕಾರ, ಮಭಾಲಟಿ ಅವರನ್ನು ನವೆಂಬರ್ 18 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಯನ್ನು 20 ಫೆಬ್ರವರಿ 2025 ಕ್ಕೆ ಮುಂದೂಡಲಾಗಿದೆ. ಉಳಿದಂತೆ ನವೆಂಬರ್ 28 ರಂದು ಸೋಲೆಕಿಲ್ ಮತ್ತು ನವೆಂಬರ್ 29 ರಂದು ಸೋತ್ಸೋಬೆಯನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ಬಹಳ ದಿನಗಳಿಂದ ತನಿಖೆ ನಡೆಯುತ್ತಿತ್ತು.
[MATCH-FIXING] Hawks’ Serious Organised Crime arrested three (3) former South African cricket players, Ethy Mbhalati (43), Thamsanqa Tsolekile (44) and Lonwabo Lennox Tsotsobe (40), implicated in a match-fixing scheme during the 2015/2016 domestic T20 Ram Slam Challenge. pic.twitter.com/u6DigVl2MX
— South African Criminal Justice System (@RSA_CJS) November 29, 2024
ಎಡಗೈ ವೇಗದ ಬೌಲರ್ ಲೊನ್ವಾಬೊ ಸೋತ್ಸೋಬೆ ಎಲ್ಲಾ ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದರು. ಆಫ್ರಿಕಾ ಪರ 61 ಏಕದಿನ ಪಂದ್ಯಗಳನ್ನಾಡಿರುವ ಸೋತ್ಸೋಬೆ 94 ವಿಕೆಟ್ ಪಡೆದಿದ್ದರು. ಈ 94 ವಿಕೆಟ್ಗಳ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿಯಂತಹ ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಹೆಸರು ಸೇರಿದೆ. ಹಾಗೆಯೇ ಸೋತ್ಸೋಬೆ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಕಬಳಿಸಿದ್ದು, ಇದರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ವಿಕೆಟ್ಗಳು ಸೇರಿವೆ. ಇದಲ್ಲದೇ ಅವರು 23 ಟಿ20 ಪಂದ್ಯಗಳನ್ನಾಡಿದ್ದು 18 ವಿಕೆಟ್ ಪಡೆದಿದ್ದಾರೆ. 2015 ರ ಡಿಸೆಂಬರ್ ನಂತರ ವೃತ್ತಿಪರ ಕ್ರಿಕೆಟ್‌ನಲ್ಲಿ ಸೋತ್ಸೋಬೆ ಯಾವುದೇ ಪಂದ್ಯವನ್ನು ಆಡಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Sat, 30 November 24