RCB: ಕನ್ನಡವೇ ಮೂಲಮಂತ್ರ, ಜೊತೆಗೆ ಬಹುಭಾಷಾ ಸೂತ್ರ; ಫ್ಯಾನ್ಸ್ಗೆ ಸ್ಪಷ್ಟನೆ ನೀಡಿದ ಆರ್ಸಿಬಿ
IPL 2025, RCB: ಐಪಿಎಲ್ ತಂಡ ಆರ್ಸಿಬಿ ಹಿಂದಿ ಖಾತೆ ತೆರೆದಿದ್ದಕ್ಕೆ ಕನ್ನಡಿಗರ ಆಕ್ರೋಶ ಎದುರಿಸಿತ್ತು. ಈಗ, ಕನ್ನಡಿಗರ ಭಾವನೆಗಳನ್ನು ಗೌರವಿಸಿ, ತಮ್ಮ ಬಹುಭಾಷಾ ವಿಸ್ತರಣಾ ಯೋಜನೆಯನ್ನು ವಿವರಿಸಿದೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಇತರೆ ಭಾರತೀಯ ಭಾಷೆಗಳಲ್ಲೂ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುವುದು ಈ ಬಹುಭಾಷಾ ಸೂತ್ರದ ಉದ್ದೇಶವಾಗಿದೆ ಎಂದು ಆರ್ಸಿಬಿ ತಿಳಿಸಿದೆ.
18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ಆರ್ಸಿಬಿ ಫ್ರಾಂಚೈಸಿ ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವುದಲ್ಲದೆ ಕನ್ನಡಿಗರಲ್ಲಿ ತನ್ನ ಮುಂದಿನ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ. ವಾಸ್ತವವಾಗಿ ಐಪಿಎಲ್ ಮೆಗಾ ಹರಾಜು ಮುಗಿದ ಬಳಿಕ ಆರ್ಸಿಬಿ ಫ್ರಾಂಚೈಸಿ, ಹಿಂದಿ ಬಾಷೆಯಲ್ಲಿ ತನ್ನ ಅಧಿಕೃತ ಎಕ್ಸ್ ಖಾತೆಯನ್ನು ತೆರೆದು ಆಟಗಾರರ ಹಾಗೂ ತಂಡದ ಬಗ್ಗೆ ಕನ್ನಡದ ಜೊತೆಗೆ ಹಿಂದಿಯಲ್ಲೂ ಮಾಹಿತಿ ನೀಡಲಾರಂಭಿಸಿತ್ತು. ಆರ್ಸಿಬಿಯ ಈ ನಡೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಆರ್ಸಿಬಿ ಹಿಂದಿ ಖಾತೆಯನ್ನು ರದ್ದುಗೊಳಿಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ದಿನದಿಂದ ದಿನಕ್ಕೆ ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಫ್ರಾಂಚೈಸಿ, ಕನ್ನಡಿಗರ ಆಕ್ರೋಶವನ್ನು ತಿಳಿಗೊಳಿಸುವ ಕೆಲಸಕ್ಕೆ ಕೈಹಾಕಿದೆ.
ಆರ್ಸಿಬಿ ಮುಂಚೂಣಿಯಲ್ಲಿದೆ
ಈಗ ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡುವುದರ ಜೊತೆಗೆ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿರುವ ಫ್ರಾಂಚೈಸಿ, ‘ ಆರ್ಸಿಬಿಗೆ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರಿಗೆ ಮತ್ತಷ್ಟು ಹತ್ತಿರವಾಗಲು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿದೆ. ಕಳೆದ ಐದು ವರ್ಷಗಳಲ್ಲಿ (2020-2024), ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಐಪಿಎಲ್ ಫ್ರಾಂಚೈಸಿಗಳಲ್ಲಿ ಆರ್ಸಿಬಿ ಮುಂಚೂಣಿಯಲ್ಲಿದೆ.
ಆರ್ಸಿಬಿಯ ಬಹುಭಾಷಾ ಸೂತ್ರ
ಹೀಗಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಒಳಗೊಳ್ಳುವಿಕೆಗೆ ನಡೆಯುತ್ತಿರುವ ಬದ್ಧತೆಯ ಭಾಗವಾಗಿ ಆರ್ಸಿಬಿ ಇದೀಗ ಬಹುಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಕರ್ನಾಟಕ ರಾಜ್ಯೋತ್ಸವದಂದು ಆರ್ಸಿಬಿಯ ಕನ್ನಡ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆಯಲಾಯಿತು. ಇದಕ್ಕೆ ಅಭೂತಪೂರ್ವ ಜನಮನ್ನಣೆ ಸಿಕ್ಕಿದ್ದು, ಕೇವಲ ಒಂದು ತಿಂಗಳಲ್ಲಿ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಪಡೆದುಕೊಂಡಿದೆ. ಇದು ತನ್ನ ಸ್ಥಳೀಯ ಅಭಿಮಾನಿಗಳಿಗೆ ತಂಡದ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತದ ಇತರ ಭಾಷೆಗಳಲ್ಲೂ ಸೋಶಿಯಲ್ ಮೀಡಿಯಾ ಖಾತೆ ಆರಂಭಿಸಿ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಪ್ರತಿ ವರ್ಷ 1,000 ಕ್ಕೂ ಹೆಚ್ಚು ವೀಡಿಯೊ
ಯಾವುದೇ ಪೋಸ್ಟ್ಗಳನ್ನು ಹಂಚಿಕೊಳ್ಳುವಾಗ ಕನ್ನಡಕ್ಕೆ ಮೊದಲ ಆಧ್ಯತೆ ನೀಡಲಿದ್ದು, ಆ ಬಳಿಕ ಭಾರತದ ಇತರೆ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಸುಧಾರಿತ AI ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿ ವರ್ಷ 1,000 ಕ್ಕೂ ಹೆಚ್ಚು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಗುರಿ ಹೊಂದಿದ್ದು, ವಿವಿಧ ಭಾರತೀಯ ಭಾಷೆಗಳಿಗೆ ಡಬ್ ಮಾಡಲು ಆರ್ಸಿಬಿ ಯೋಜಿಸಿದೆ. ಡಬ್ ಮಾಡಲಾದ ವಿಡಿಯೋಗಳಲ್ಲಿ ಕ್ರಿಕೆಟಿಗರು ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಮಾತನಾಡುತ್ತಿರುವಂತಹ ಅನುಭವವನ್ನು ಒದಗಿಸಲಾಗುತ್ತದೆ.
ಇತರ ಭಾಷೆಗಳಲ್ಲಿ ಖಾತೆ ಆರಂಭ
ಆರ್ಸಿಬಿಯ ಈ ಬಹುಭಾಷಾ ವಿಸ್ತರಣಾ ಯೋಜನೆಯ ಅಂಗವಾಗಿ 2025 ರಲ್ಲಿ ತೆಲುಗು ಖಾತೆಯನ್ನು ಆರಂಭಿಸಲಿದ್ದು, 2026 ರಲ್ಲಿ ಮಲಯಾಳಂ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲೂ ಸೋಶಿಯ ಮೀಡಿಯಾ ಖಾತೆಗಳನ್ನು ತೆರೆದು ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ