IND vs PAK: ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ವಿರುದ್ಧ ಮುಗ್ಗರಿಸಿದ ಭಾರತ
U19 Asia Cup 2024: ಯುಎಇಯಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 43 ರನ್‌ಗಳಿಂದ ಸೋಲು ಅನುಭವಿಸಿದೆ. ಪಾಕಿಸ್ತಾನ ನೀಡಿದ 281 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ಹೀಗಾಗಿ ಇಡೀ ತಂಡ ಕೇವಲ 238 ರನ್‌ಗಳಿಗೆ ಆಲೌಟ್ ಆಯಿತು.
ಯುಎಇಯಲ್ಲಿ ನಿನ್ನೆಯಿಂದ ಆರಂಭವಾಗಿರುವ ಪುರುಷರ ಅಂಡರ್-19 ಏಷ್ಯಾಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಇಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತ್ತು. ಆದರೆ ಉಭಯ ತಂಡಗಳ ನಡುವೆ ನಡೆದ ಈ ಹೈವೋಲ್ಟೇಜ್ ಕದನವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಪಾಕಿಸ್ತಾನ ಯುವ ಪಡೆ ಯಶಸ್ವಿಯಾಗಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ 43 ರನ್‌ಗಳ ಸೋಲನುಭವಿಸಿದೆ. ಭಾರತ ತಂಡದ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದ ವೈಫಲ್ಯವೇ ಈ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿದ್ದು, ಇದೀಗ ಸೋಲಿನೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಿದೆ.
ಬೃಹತ್ ಮೊತ್ತ ಕಲೆಹಾಕಿದ ಪಾಕ್
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ್ದ ಉಸ್ಮಾನ್ ಖಾನ್ ಮತ್ತು ಶಹಜೇಬ್ ಖಾನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 160 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಉಸ್ಮಾನ್ ಖಾನ್ 94 ಎಸೆತಗಳಲ್ಲಿ 60 ರನ್ ಗಳಿಸಿದರೆ, ಶಹಜೇಬ್ ಖಾನ್ 147 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 5 ಬೌಂಡರಿ ಸಹಿತ ಒಟ್ಟು 159 ರನ್ ಕಲೆಹಾಕಿದರು. ಮತ್ತೊಂದೆಡೆ, ಭಾರತದ ಪರ ಸಮರ್ಥ್ ನಾಗರಾಜ್ ಗರಿಷ್ಠ 3 ವಿಕೆಟ್ ಪಡೆದರೆ, ಆಯುಷ್ ಮ್ಹಾತ್ರೆ 2 ವಿಕೆಟ್ ಮತ್ತು ಯುಧಾಜಿತ್ ಗುಹಾ-ಕಿರಣ್ ಚೋರ್ಮಲೆ ತಲಾ ಒಂದು ವಿಕೆಟ್ ಪಡೆದರು.
ಭಾರತದ ಬ್ಯಾಟಿಂಗ್ ವಿಫಲ
282 ರನ್‌ಗಳ ಗುರಿಗೆ ಉತ್ತರವಾಗಿ ಭಾರತದ ಬ್ಯಾಟಿಂಗ್ ಸಂಪೂರ್ಣ ವಿಫಲವಾಯಿತು. ತಂಡ 28 ರನ್ ಗಳಿಸುವಷ್ಟರಲ್ಲಿ ಆಯುಷ್ ಮ್ಹಾತ್ರೆ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕವೂ ಭಾರತದ ಪೆವಿಲಿಯನ್ ಪರೇಡ್ ಮುಂದುವರೆಯಿತು. ಅದರ ಪರಿಣಾಮವಾಗಿ ಭಾರತ ತಂಡದ ಅರ್ಧದಷ್ಟು ಮಂದಿ ಕೇವಲ 134 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ, ತಂಡದ ಪರ ಏಕಾಂಗಿ ಹೋರಾಟ ನೀಡಿದ ನಿಖಿಲ್ ಕುಮಾರ್ 77 ಎಸೆತಗಳಲ್ಲಿ 67 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಇಡೀ ತಂಡವು ಕೇವಲ 47.1 ಓವರುಗಳಲ್ಲಿ ಆಲೌಟ್ ಆಗುವ ಮೂಲಕ 237 ರನ್ಗಳಿಸಲಷ್ಟೇ ಶಕ್ತವಾಯಿತು.
ತನ್ನ ಚೊಚ್ಚಲ ಪಂದ್ಯವನ್ನು ಸೋತಿರುವ ಭಾರತ ಇದೀಗ ಡಿಸೆಂಬರ್ 2 ರಂದು ಶಾರ್ಜಾದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಆ ನಂತರ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಯುಎಇ ತಂಡವನ್ನು ಡಿಸೆಂಬರ್ 4 ರಂದು ಎದುರಿಸಲಿದೆ. ಇದಾದ ನಂತರ ಎರಡೂ ಗುಂಪುಗಳ ತಲಾ 2 ಅಗ್ರ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಎರಡು ಸೆಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ಡಿಸೆಂಬರ್ 8 ರಂದು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sat, 30 November 24