
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರ ಶನಿವಾರ ಗಾಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೀಂ ಇಂಡಿಯಾ ಆಡುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ, ಬಹುತೇಕ ಇಡೀ ತಂಡಕ್ಕೆ ಈ ಪರಿಸ್ಥಿತಿಗಳ ಬಗ್ಗೆ ತಿಳಿದಿಲ್ಲ. ಪ್ರಸ್ತುತ ತಂಡದಲ್ಲಿರುವ ಮೂವರು ಆಟಗಾರರು ಮಾತ್ರ ಗಾಲೆಯಲ್ಲಿ ಟೆಸ್ಟ್ ಪಂದ್ಯ ಆಡಿದ್ದಾರೆ, ಆದರೆ ಕ್ಯಾಪ್ಟನ್ ಗಿಲ್ ಸೇರಿದಂತೆ ಅನೇಕ ಆಟಗಾರರು ಇಲ್ಲಿ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಿದ್ದಾರೆಯಾದರೂ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ಈ ಸವಾಲನ್ನು ಅನಾನುಭವಿ ಟೀಂ ಇಂಡಿಯಾ ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ಪಿಚ್ ಯಾರಿಗೆ ಸಹಕರಿಸಲಿದೆ ಎಂಬುದನ್ನು ನೋಡೋಣ.
ಪಂದ್ಯದ ದಿನದಂದು ಅಂದರೆ ಶನಿವಾರದಂದು ಗಾಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ಪ್ರಕಾರ, ಹಗಲಿನಲ್ಲಿ ಮಳೆಯಾಗುವ ಸಾಧ್ಯತೆ ಶೇ. 82 ರಷ್ಟು ಇದೆ. ಪಂದ್ಯದ ದಿನದಂದು ಬೆಳಿಗ್ಗೆ 8 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 65 ರಷ್ಟು ಇದೆ. ಶುಕ್ರವಾರ ಸಂಜೆಯಿಂದ ಇಲ್ಲಿಯೂ ನಿರಂತರ ಮಳೆಯಾಗುವ ನಿರೀಕ್ಷೆಯಿದೆ. ಇದರರ್ಥ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಬಹುದು.
IND vs SL: ಟಿಕೆಟ್ ಖರೀದಿಸಬೇಕಿಲ್ಲ; ಅಭಿಮಾನಿಗಳಿಗೆ ಉಚಿತ ಪ್ರವೇಶ
ಭಾರತವು ಈ ಹಿಂದೆ ಗಾಲೆಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಟೀಂ ಇಂಡಿಯಾ ಕೊನೆಯದಾಗಿ 2017 ರಲ್ಲಿ ಗಾಲೆಯಲ್ಲಿ ಆಡಿದ್ದು, 304 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು. ಇನ್ನು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ನ ಇತ್ತೀಚಿನ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳು ಆರಂಭಿಕ ನೆರವು ಪಡೆಯಬಹುದು. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು. ಇದಲ್ಲದೆ, ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್‌ಗಳು ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಪಡೆಯುತ್ತಾರೆ. ಇದರರ್ಥ ಈ ಮೈದಾನದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದಾರೆ.
Published On - 5:38 pm, Fri, 14 August 26