Gautam Gambhir: ಮುಖ್ಯ ಕೋಚ್ ಹುದ್ದೆಯ ಬಗ್ಗೆ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್

|

Updated on: Jun 02, 2024 | 8:42 PM

Gautam Gambhir: ಮುಂದಿನ ಮುಖ್ಯ ಕೋಚ್ ಆಗಲು ಗಂಭೀರ್ ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಗಂಭೀರ್ ಈ ಬಗ್ಗೆ ಏನನ್ನೂ ಹೇಳಿಲ್ಲ ಅಥವಾ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ಹೇಳಿಕೆ ನೀಡಿದ್ದಾರೆ.

Gautam Gambhir: ಮುಖ್ಯ ಕೋಚ್ ಹುದ್ದೆಯ ಬಗ್ಗೆ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್
ಗೌತಮ್ ಗಂಭೀರ್
Follow us on

ಭಾರತ ತಂಡದ (Team India) ಮುಂದಿನ ಮುಖ್ಯ ಕೋಚ್ ಯಾರು ಎಂಬುದು ಸದ್ಯದ ಕೋಟ್ಯಂತರ ಭಾರತೀಯ ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ನಡುವೆ ಭಾರತ ತಂಡದ ಮಾಜಿ ಆಟಗಾರ ಹಾಗೂ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ (Gautam Gambhir) ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಹಲವು ವರದಿಗಳು ಹೇಳುತ್ತಿವೆ. ಅಲ್ಲದೆ ಗಂಭೀರ್ ಅವರ ಎಲ್ಲಾ ಷರತ್ತುಗಳನ್ನು ಬಿಸಿಸಿಐ (BCCI) ಒಪ್ಪಿಕೊಂಡಿದ್ದು, ಮುಂದಿನ ಮುಖ್ಯ ಕೋಚ್ ಆಗಲು ಗಂಭೀರ್ ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಗಂಭೀರ್ ಈ ಬಗ್ಗೆ ಏನನ್ನೂ ಹೇಳಿಲ್ಲ ಅಥವಾ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ಗಂಭೀರ್ ಹೇಳಿದ್ದೇನು?

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಹಲವು ದಿನಗಳಿಂದ ಊಹಾಪೋಹಗಳಿದ್ದವು. ಇದೀಗ ಈ ಬಗ್ಗೆ ಗಂಭೀರ್ ಹೇಳಿಕೆ ನೀಡಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಗಂಭೀರ್ ದುಬೈನಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಗುವೊಂದು, ನೀವು ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಲು ಬಯಸುತ್ತೀರಾ ಮತ್ತು ಭಾರತ ತಂಡವನ್ನು ವಿಶ್ವಕಪ್ ಗೆಲ್ಲಲು ನೀವು ಏನು ಮಾಡುತ್ತೀರ? ಎಂಬ ಪ್ರಶ್ನೆ ಕೇಳಿದೆ. ಇದಕ್ಕೆ ಉತ್ತರಿಸಿರುವ ಗಂಭೀರ್, ‘ಭಾರತ ತಂಡದ ಮುಖ್ಯ ಕೋಚ್ ಆಗುವ ಅವಕಾಶ ಸಿಕ್ಕರೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಭಾರತ ತಂಡದ ಮುಖ್ಯ ಕೋಚ್ ಆಗುವುದು ಎಂದರೆ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುವುದು ಎಂದರ್ಥ.ಹೀಗಾಗಿ ಇದು ದೊಡ್ಡ ವಿಷಯ ಎಂದಿದ್ದಾರೆ. ಇದರರ್ಥ ಗಂಭೀರ್ ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಲು ಸಿದ್ಧರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಜುಲೈ 1 ರಿಂದ ಟೀಂ ಇಂಡಿಯಾಗೆ ಹೊಸ ಕೋಚ್

ಗಂಭೀರ್ ಹೊರತಾಗಿ, ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಬಹುದಾದ ಅನೇಕ ಅನುಭವಿ ಕ್ರಿಕೆಟಿಗರ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಒಬ್ಬರ ನಂತರ ಒಬ್ಬರಂತೆ ಅನೇಕ ಅನುಭವಿಗಳು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್, ಲಂಕಾ ತಂಡದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕಾರ ಕೂಡ ಮುಖ್ಯ ಕೋಚ್ ಆಗಲು ನಿರಾಕರಿಸಿದ್ದರು. ಹೀಗಿರುವಾಗ ಬಿಸಿಸಿಐ ಹಾಗೂ ಭಾರತ ತಂಡಕ್ಕೆ ಟೆನ್ಶನ್ ಶುರುವಾಗಿತ್ತು. ಟಿ20 ವಿಶ್ವಕಪ್ ನಂತರ ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ಮುಖ್ಯ ಕೋಚ್‌ ಆದರೆ ಜುಲೈ 1ರಿಂದ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Sun, 2 June 24