T20 World Cup 2024: ಪಾಂಡ್ಯ ಪವರ್ಫುಲ್ ಶಾಟ್; ಬಾಂಗ್ಲಾ ಬೌಲರ್ ಅಂಗೈಗೆ 6 ಹೊಲಿಗೆ..!
T20 World Cup 2024: ಅಭ್ಯಾಸ ಪಂದ್ಯದಲ್ಲೇ ಬಾಂಗ್ಲಾದೇಶ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಅಂಗೈ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ತಂಡದ ಮೊದಲ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ (T20 World Cup 2024) ಆರಂಭವಾಗುವ ಮುನ್ನವೇ ಬಾಂಗ್ಲಾದೇಶ (Bangladesh) ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಜೂನ್ 1ರ ಶನಿವಾರದಂದು ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ತಂಡದ ವೇಗದ ಬೌಲರ್ ಶೋರಿಫುಲ್ ಇಸ್ಲಾಂ (Shoriful Islam) ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅಲ್ಲದೆ ಅವರ ಕೈಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ. ಸದ್ಯ ಅಭ್ಯಾಸ ಪಂದ್ಯದಲ್ಲಿ ಗಾಯ ಮಾಡಿಕೊಂಡಿರುವ ಶೋರಿಫುಲ್ ಗಾಯ ಗುಣವಾಗಲು ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರರ್ಥ ಜೂನ್ 7 ರಂದು ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶದ ಆರಂಭಿಕ ಪಂದ್ಯದಲ್ಲಿ ಅವರು ಆಡಲು ಸಾಧ್ಯವಾಗುವುದಿಲ್ಲ. ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ಪರ ಅದ್ಭುತ ಬೌಲಿಂಗ್ ಮಾಡಿದ್ದ ಶೋರಿಫುಲ್ ತಮ್ಮ ಖೋಟಾದ 3.5 ಓವರ್ ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆದರೆ ಈಗ ಅವರ ಗಾಯಗೊಂಡಿರುವುದು ಬಾಂಗ್ಲಾದೇಶ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ಪಾಂಡ್ಯ ಹೊಡೆತದಿಂದ ಗಾಯ
ಜೂನ್ 1 ರಂದು ನಾಸೊ ಕೌಂಟಿ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ 60 ರನ್‌ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ನ 20ನೇ ಓವರ್‌ನಲ್ಲಿ ಶೋರಿಫುಲ್ ಗಾಯಗೊಂಡ ಘಟನೆ ನಡೆಯಿತು. ಕೊನೆಯ ಓವರ್ ಬೌಲ್ ಮಾಡಲು ಬಂದ ಶೋರಿಫುಲ್ ಐದನೇ ಎಸೆತದಲ್ಲಿ ಯಾರ್ಕರ್ ಎಸೆದರು. ಈ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಈ ಯಾರ್ಕರ್ ಅನ್ನು ನೇರ ಬ್ಯಾಟ್‌ನಿಂದ ವೇಗವಾಗಿ ಹೊಡೆದರು, ಅದನ್ನು ಶೋರಿಫುಲ್ ತನ್ನ ಅಂಗೈಯಿಂದ ನಿಲ್ಲಿಸಲು ಪ್ರಯತ್ನಿಸಿದರು. ಹೊಡೆತವು ತುಂಬಾ ವೇಗವಾಗಿದ್ದರಿಂದ ಶೋರಿಫುಲ್ ಅಂಗೈಗೆ ಗಾಯವಾಯಿತು. ತಕ್ಷಣವೇ ಅವರು ಮೈದಾನ ತೊರೆದಿದ್ದರು. ಆ ನಂತರ ಬಂದ ಸುದ್ದಿಯ ಪ್ರಕಾರ, ಶೋರಿಫುಲ್ ಅವರ ಬೆರಳು ಮತ್ತು ಅಂಗೈ ನಡುವೆ 6 ಹೊಲಿಗೆಗಳನ್ನು ಹಾಕಲಾಗಿದೆ.
— Bangladesh vs Sri Lanka (@Hanji_CricDekho) June 1, 2024
ಬಾಂಗ್ಲಾ ತಂಡಕ್ಕೆ ಭಾರಿ ನಷ್ಟ
ಬಾಂಗ್ಲಾ ತಂಡದ ವೇಗದ ದಾಳಿಯಲ್ಲಿ ಮುಸ್ತಫಿಜುರ್ ರೆಹಮಾನ್, ತಂಝೀಮ್ ಶಕೀಬ್ ಮತ್ತು ತಸ್ಕಿನ್ ಅಹ್ಮದ್ ಜೊತೆಗೆ ಶೋರಿಫುಲ್ ಇಸ್ಲಾಂ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಅವರ ಗಾಯದ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ. ಅವರು ಗಾಯದಿಂದ ಬೇಗ ಗುಣವಾಗದಿದ್ದರೆ ಬಾಂಗ್ಲಾ ತಂಡಕ್ಕೆ ಹಿನ್ನಡೆಯುಂಟಾಗಲಿದೆ. ಏಕೆಂದರೆ ತಸ್ಕಿನ್ ಅಹ್ಮದ್ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಬಾಂಗ್ಲಾದೇಶ ವೇಗದ ಬೌಲರ್ ಹಸನ್ ಮಹಮೂದ್ ಅವರನ್ನು ಕೂಡ ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಒಂದು ವೇಳೆ ಶೋರಿಫುಲ್ ಗುಣಮುಖರಾಗದಿದ್ದರೆ, ಹಸನ್ ಮಹಮೂದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
ಭಾರತಕ್ಕೆ 60 ರನ್‌ಗಳ ಜಯ
ಟೀಂ ಇಂಡಿಯಾ ಆಡಿದ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 60 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 182 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ ಕೇವಲ 122 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಪಂತ್ 32 ಎಸೆತಗಳಲ್ಲಿ 53 ರನ್ ಮತ್ತು ಪಾಂಡ್ಯ 23 ಎಸೆತಗಳಲ್ಲಿ 40 ರನ್ ಬಾರಿಸಿದರು. ಇವರಲ್ಲದೆ ಸೂರ್ಯಕುಮಾರ್ ಯಾದವ್ ಕೂಡ 18 ಎಸೆತಗಳಲ್ಲಿ 30 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಬೌಲಿಂಗ್ನಲ್ಲಿ ಮಿಂಚಿದ ಅರ್ಷದೀಪ್ ಸಿಂಗ್ 3 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ