Gautam Gambhir: ಗೌತಮ್ ಗಂಭೀರ್ ಸುದ್ದಿಗೋಷ್ಠಿಯ 5 ಮುಖ್ಯಾಂಶಗಳು

|

Updated on: Jul 22, 2024 | 12:41 PM

Team India: ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡವು ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.

Gautam Gambhir: ಗೌತಮ್ ಗಂಭೀರ್ ಸುದ್ದಿಗೋಷ್ಠಿಯ 5 ಮುಖ್ಯಾಂಶಗಳು
Gautam Gambhir
Follow us on

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ನಿಮಿತ್ತ ಮುಂಬೈನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಈ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರಿಗೆ ಹಲವು ಜ್ವಲಂತ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದಕ್ಕೆ ಅವರು ದಿಟ್ಟ ಉತ್ತರ ನೀಡಿದ್ದಾರೆ. ಈ ಪ್ರಶ್ನೋತ್ತರಗಳ ಐದು ಮುಖ್ಯಾಂಶಗಳನ್ನು ಈ ಕೆಳಗೆ ನೀಡಲಾಗಿದೆ…

ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ:

ಈ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಹೇಗಿದೆ ಎಂಬ ಪ್ರಶ್ನೆಯನ್ನು ಗಂಭೀರ್ ಅವರ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಟೀಮ್ ಇಂಡಿಯಾ ಕೋಚ್, ನಾನು ಕೊಹ್ಲಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ನನ್ನ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಕೇವಲ ವದಂತಿಗಳು ಅಷ್ಟೇ. ಇದೆಲ್ಲಾ ಟಿಆರ್​ಪಿಗಾಗಿ ಒಳ್ಳೆಯದು. ಆದರೆ ನನ್ನ ಹಾಗೂ ಕೊಹ್ಲಿ ನಡುವೆ ಉತ್ತಮ ಸಂಬಂಧವಿದೆ. ನಾವಿಬ್ಬರೂ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಉತ್ತರಿಸಿದರು.

ಕೊಹ್ಲಿ-ರೋಹಿತ್ ಭವಿಷ್ಯ:

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಅವರಿಬ್ಬರು ವಿಶ್ವ ದರ್ಜೆಯ ಆಟಗಾರರು. ಈಗಾಗಲೇ ಪ್ರಮುಖ ಟೂರ್ನಿಗಳಲ್ಲಿ ಅವರು ಏನು ಮಾಡಬಲ್ಲರು ಎಂಬುದನ್ನು ಟಿ20 ವಿಶ್ವಕಪ್​ ಹಾಗೂ ಏಕದಿನ ವಿಶ್ವಕಪ್​ ಮೂಲಕ ತೋರಿಸಿದ್ದಾರೆ. ಇದೀಗ ನಮ್ಮ ಮುಂದೆ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ಸರಣಿ ಇದೆ. ಇದಾದ ಬಳಿಕ ಫಿಟ್​ನೆಸ್ ಉಳಿಸಿಕೊಂಡರೆ ಅವರಿಬ್ಬರೂ 2027ರ ಏಕದಿನ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾ ಯಾಕಿಲ್ಲ:

ಶ್ರೀಲಂಕಾ ವಿರುದ್ಧದ ಸರಣಿಗೆ ಜಸ್​ಪ್ರೀತ್ ಬುಮ್ರಾ ಅವರನ್ನು ಯಾಕಾಗಿ ಆಯ್ಕೆ ಮಾಡಿಲ್ಲ ಎಂದು ಕೇಳಿದಾಗ, ಬುಮ್ರಾ ಅವರಿಗೆ ಹೆಚ್ಚಿನ ಕೆಲಸದ ಒತ್ತಡ ನೀಡಲು ನಾವು ಬಯಸುತ್ತಿಲ್ಲ. ವೇಗದ ಬೌಲರ್‌ನ ಕೆಲಸದ ಭಾರವನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಬುಮ್ರಾ ನಮ್ಮ ಪ್ರಮುಖ ಬೌಲರ್. ಅವರಂತಹ ಬೌಲರ್ ನೂರರಲ್ಲಿ ಒಬ್ಬರು. ಹೀಗಾಗಿ ಅವರ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ತಿಳಿಸಿದರು.

ಡ್ರೆಸ್ಸಿಂಗ್ ರೂಮ್​ ವಾತಾವರಣ:

ನಿಮ್ಮ ಕೋಚಿಂಗ್​ನಲ್ಲಿ ಡ್ರೆಸ್ಸಿಂಗ್ ರೂಮ್ ವಾತಾವರಣ ಹೇಗಿರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನಮ್ದು ಈಗ ಟಿ20 ವಿಶ್ವ ಚಾಂಪಿಯನ್ ತಂಡ. ಇಂತಹ ಪರಿಸ್ಥಿತಿಯಲ್ಲಿ ಡ್ರೆಸ್ಸಿಂಗ್ ರೂಮಿನ ವಾತಾವರಣವನ್ನು ಉತ್ತಮವಾಗಿರಿಸುವುದು ಮತ್ತು ಆಟಗಾರರನ್ನು ಸಂತೋಷವಾಗಿರಿಸುವುದು ಮಾತ್ರ ನಮ್ಮ ಕೆಲಸ. ಏಕೆಂದರೆ ತಂಡದ ಗೆಲುವಿನ ಸೂತ್ರವು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ವಾತಾವರಣವನ್ನು ಅವಲಂಬಿಸಿರುತ್ತದೆ. ಹೀಗಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಲ್ಲಾ ಆಟಗಾರರನ್ನು ಸಂತೋಷದಿಂದ ಇರುವಂತಹ ವಾತಾವರಣ ಸೃಷ್ಟಿಸಿಕೊಳ್ಳುತ್ತೇವೆ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

ರವೀಂದ್ರ ಜಡೇಜಾ ಭವಿಷ್ಯ:

ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಜಡೇಜಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಈ ಬಗ್ಗೆ ಕೇಳಿದಾಗ, ಭಾರತ ತಂಡಕ್ಕೆ ಮುಂದೆ ಟೆಸ್ಟ್ ಸರಣಿ ಇದೆ. ಆ ಸರಣಿಗಳಲ್ಲಿ ಅಲ್ಲಿ ಅವರ ಪಾತ್ರ ಮುಖ್ಯವಾಗಿರಲಿದೆ. ಹೀಗಾಗಿ ಮುಂಬರುವ ಟೆಸ್ಟ್ ಸರಣಿಯ ಮೂಲಕ ಜಡೇಜಾ ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿಸಿದರು.