ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸೋಮವಾರ ಬೆಳಿಗ್ಗೆ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ಕಾಣಿಸಿಕೊಂಡ ಗಂಭೀರ್, ಭಾರತ ತಂಡದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಭಾರತ ತಂಡದ ಕೋಚ್ ಆಗಿ ಬಿಸಿಸಿಐ ಅವಕಾಶ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಗಂಭೀರ್, ನನಗೆ ನೀಡಿರುವ ಅವಕಾಶವನ್ನು ಜವಾಬ್ದಾರಿಯಿಂದ ನಿರ್ವಹಿಸುವೆ ಎಂಬ ವಿಶ್ವಾಸವಿದೆ. ಅಲ್ಲದೆ ಭಾರತ ತಂಡವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಿದ್ದೇನೆ. ನನ್ನ ಕೋಚಿಂಗ್ನಲ್ಲಿ ನಾನು ಆಟಗಾರರಿಗೆ ಮುಕ್ತ ಅವಕಾಶ ನೀಡುವೆ. 15 ಆಟಗಾರರ ಒಂದು ತಂಡವನ್ನು ಒಟ್ಟಾಗಿ ಮುನ್ನಡೆಸಬೇಕು ಎಂಬುದು ನನ್ನ ಧ್ಯೇಯ ಎಂದು ಹೇಳಿದರು.
ನನಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಪ್ರತಿಯೊಬ್ಬರು ಜೊತೆಯಾಗಿ ನಿಲ್ಲುವುದು. ಇಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿನ ಸಂತೋಷ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಅಂತಹ ವಿಷಯಗಳನ್ನು ಸಂಕೀರ್ಣಗೊಳಿಸಲು ಬಯಸುವುದಿಲ್ಲ. ಏಕೆಂದರೆ ನಾನು ಅತ್ಯಂತ ಯಶಸ್ವಿ ತಂಡದ ಕೋಚ್ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಟಿ20 ವಿಶ್ವ ಚಾಂಪಿಯನ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರನ್ನರ್ ಅಪ್, ಏಕದಿನ ವಿಶ್ವಕಪ್ನಲ್ಲಿ ಭಾರತ ರನ್ನರ್ ಅಪ್ ಆಗಿದೆ. ಇಲ್ಲಿಂದ ಭಾರತ ತಂಡವನ್ನು ಮುನ್ನಡೆಸಬೇಕಾದ ಜವಾಬ್ದಾರಿ ನನ್ನ ಮೇಲಿದೆ ಎಂದು ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಕೇಳಲಾದ ಪ್ರಶ್ನೆಗೆ ಮಾತನಾಡಿದ ಗಂಭೀರ್, ಪ್ರಮುಖ ಪಂದ್ಯಗಳ ವೇಳೆ ಅವರು ಏನು ನೀಡಬಲ್ಲರು ಎಂಬುದನ್ನು ಅವರು ತೋರಿಸಿದ್ದಾರೆ. ಅದು ಟಿ20 ವಿಶ್ವಕಪ್ ಆಗಿರಲಿ ಅಥವಾ ಏಕದಿನ ವಿಶ್ವಕಪ್ ಆಗಿರಲಿ. ಆ ಇಬ್ಬರೂ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಾರೆ ಎಂದು ಭಾವಿಸುತ್ತೇನೆ.
ನಮ್ಮ ಮುಂದೆ ಈಗ ಚಾಂಪಿಯನ್ಸ್ ಟ್ರೋಫಿ ಇದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಇದೆ. ಈ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಡೆಯಿಂದ ಅತ್ಯುತ್ತಮ ಪ್ರದರ್ಶನವನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: RCB ತಂಡಕ್ಕೆ ಕೆಎಲ್ ರಾಹುಲ್ ರಿಎಂಟ್ರಿ?
ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, 2027ರ ಏಕದಿನ ವಿಶ್ವಕಪ್ ವರೆಗೆ ಅವರು ತಮ್ಮ ಫಿಟ್ನೆಸ್ ಅನ್ನು ಉಳಿಸಿಕೊಳ್ಳಬಹುದು. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ಹೇಳುವುದು ಕಷ್ಟ. ಪ್ರಮುಖ ಆಟಗಾರರು ತಂಡದ ಕಣಕ್ಕಿಳಿಯುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಕಾದು ನೋಡೋಣ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Mon, 22 July 24