ಪ್ರಸ್ತುತ ವಿಶ್ವ ಕ್ರಿಕೆಟ್ನ ಮೂಲೆ ಮೂಲೆಯಲ್ಲೂ ಮೇಳೈಸುತ್ತಿರುವ ಹೆಸರೆಂದರೆ ಅದು ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav). ತನ್ನ ಸ್ಫೋಟಕ ಬ್ಯಾಟಿಂಗ್ನಿಂದ ಕ್ರಿಕೆಟ್ ದುನಿಯಾದಲ್ಲಿ ರಾಜನಾಗಿ ಮೆರೆಯುತ್ತಿರುವ ಸೂರ್ಯ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಹೀಗಾಗಿಯೇ ಈ ಆಟಗಾರನನ್ನು ಕ್ರಿಕೆಟ್ ಪಂಡಿತರು ಆಡಿ ಹೊಗಳುತ್ತಿರುವುದು. ಈಗ ಸೂರ್ಯಕುಮಾರ್ ಯಾದವ್ ಬಗ್ಗೆ ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ನೀಡಿರುವ ಹೇಳಿಕೆ ಟೀಂ ಇಂಡಿಯಾ ಅಭಿಮಾನಿಗಳು ಕಾಲರ್ ಎತ್ತುವಂತೆ ಮಾಡಿದೆ. ವಾಸ್ತವವಾಗಿ ಮ್ಯಾಕ್ಸ್‌ವೆಲ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ. ಅವರನ್ನು ಖರೀದಿಸುವಷ್ಟು ಹಣ ಬಿಬಿಎಲ್ನಲ್ಲಿ ಇಲ್ಲ ಎಂದಿದ್ದಾರೆ.
ಆತನನ್ನು ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ
‘ದಿ ಗ್ರೇಡ್ ಕ್ರಿಕೆಟರ್’ಗೆ ನೀಡಿದ ಸಂದರ್ಶನದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸೂರ್ಯಕುಮಾರ್ ಯಾದವ್ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವುದನ್ನು ನಾವು ನೋಡುತ್ತೇವೆಯೇ? ಹೀಗೊಂದು ಪ್ರಶ್ನೆಯನ್ನು ಗ್ಲೆನ್ ಮ್ಯಾಕ್ಸ್ವೆಲ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮ್ಯಾಕ್ಸ್‌ವೆಲ್, “ಬಿಬಿಎಲ್ ಬಳಿ ಕಡಿಮೆ ಹಣ ಇರುತ್ತದೆ. ಹಾಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಖರೀದಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬೌಲರ್‌ಗಳಿಗೆ ಸವಾಲಾಗಿದೆ
ಈ ವರ್ಷ ಟೀಂ ಇಂಡಿಯಾ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ರನ್ ಮಳೆ ಸುರಿಸುತ್ತಿದ್ದಾರೆ. 2022ರಲ್ಲಿ 31 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ 1164 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳಿವೆ. ಅಲ್ಲದೆ ಸೂರ್ಯಕುಮಾರ್ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಕ್ರಿಕೆಟ್ ಜಗತ್ತಿನ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದಾರೆ. ಸದ್ಯ ಕ್ರಿಕೆಟ್ ಲೋಕದಲ್ಲಿ ಸುನಾಮಿ ಎಬ್ಬಿಸಿರುವ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಲು ಯಾವುದೇ ಬೌಲರ್ಗೆ ಸಾಧ್ಯವಾಗುತ್ತಿಲ್ಲ.
ಟಿ20 ಶ್ರೇಯಾಂಕದಲ್ಲಿ ನಂ.1
ಸೂರ್ಯಕುಮಾರ್ ಯಾದವ್ ಸದ್ಯ ಪ್ರತಿ ಸರಣಿಯಲ್ಲೂ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರು 51 ಎಸೆತಗಳಲ್ಲಿ ಅಜೇಯ 111 ರನ್ ಗಳಿಸಿದ ಸೂರ್ಯ ಎರಡನೇ ಟಿ20 ಶತಕ ಸಿಡಿಸಿ ಮಿಂಚಿದ್ದರು. ಈ ಸರಣಿಯಲ್ಲಿ 31 ರೇಟಿಂಗ್ ಪಾಯಿಂಟ್ ಗಳಿಸಿದ ಸೂರ್ಯಕುಮಾರ್ 890 ರೇಟಿಂಗ್ ಅಂಕಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಮೊದಲ ಸ್ಥಾನಗಳಿಸಿದ್ದಾರೆ.
Published On - 9:36 am, Fri, 25 November 22