ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2023) ತೆರೆಬೀಳುತ್ತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಗುಜರಾತ್ ಟೈಟಾನ್ಸ್ (CSK vs GT) ಪೈಕಿ ಒಂದು ತಂಡ ಚಾಂಪಿಯನ್ ಆಗಿರುತ್ತಿತ್ತು. ಆದರೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗದೆ ಪಂದ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಅಲ್ಲದೆ ಸೋಮವಾರ ಮೀಸಲು ದಿನಕ್ಕೆ ಐಪಿಎಲ್ 2023 ಫೈನಲ್ (IPL Final) ಪಂದ್ಯವನ್ನು ಮುಂದುಡಲಾಯಿತು. ಅದರಂತೆ ಇಂದು ಸಿಎಸ್ಕೆ- ಜಿಟಿ ನಡುವೆ ಅಂತಿಮ ಕಾದಾಟವನ್ನು ಆಯೋಜಿಸಲಾಗಿದೆ.
ಸಿಎಸ್ಕೆ ತಂಡ ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಕ್ವಾಲಿಫೈಯರ್-1 ರಲ್ಲಿ ಇದೇ ಗುಜರಾತ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ಗೆ ಪ್ರವೇಶ ಪಡೆದಿರುವುದು ಪ್ಲಸ್ ಪಾಯಿಂಟ್. ಚೆನ್ನೈ ಓಪನರ್ಗಳಾದ ರುತುರಾಯ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಸಿಎಸ್ಕೆ ಪರ ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಬೌಲಿಂಗ್ನಲ್ಲಿ ಸಿಎಸ್ಕೆ ಪರ ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ಮತೀಶಾ ಪತಿರಾನ, ಆಕಾಶ್ ಸಿಂಗ್ ಇದ್ದು ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.
CSK vs GT IPL 2023 Final: ‘ಹೆದರುವುದಿಲ್ಲ’; ಫೈನಲ್ಗೂ ಮುನ್ನ ಚೆನ್ನೈ ಕೋಚ್ ಹೇಳಿದ್ದೇನು ಗೊತ್ತಾ?
ಇತ್ತ ಗುಜರಾತ್ ತಂಡ ಇಡೀ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಾ ಬಂದಿದೆ. ಅದರಲ್ಲೂ ಎಲಿಮಿನೇಟರ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ವೃದ್ದಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದ್ದಾರೆ. ಗಿಲ್ ಅಂತೂ ಬೊಂಬಾಟ್ ಫಾರ್ಮ್ನಲ್ಲಿದ್ದು ಹಿಂದಿನ ಮ್ಯಾಚ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಇವರ ಖಾತೆಯಿಂದ ಈ ಬಾರಿ ಒಟ್ಟು ಮೂರು ಸೆಂಚುರಿ ಬಂದಿವೆ.
ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಪಾಂಡ್ಯ ಜೊತೆ ರಶೀದ್ ಖಾನ್ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ಮಾರಕವಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಗುಜರಾತ್ ಟೈಟನ್ಸ್ 3 ಪಂದ್ಯದಲ್ಲಿ ಜಯಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಮೇಲ್ನೋಟಕ್ಕೆ ಜಿಟಿ ಬಲಿಷ್ಠವಾದಂತೆ ಗೋಚರಿಸುತ್ತಿದೆ. ಅಲ್ಲದೆ ಇಂದಿನ ಪಂದ್ಯವೂ ಮಳೆಯಿಂದ ರದ್ದಾದರೆ ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಹೀಗಾದಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಚಾಂಪಿಯನ್ ಆಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ