IPL 2022: ಗುಜರಾತ್ ಟೈಟಾನ್ಸ್! ಅಹಮದಾಬಾದ್ ಫ್ರಾಂಚೈಸಿಯಿಂದ ತಂಡದ ಅಧಿಕೃತ ಹೆಸರು ಘೋಷಣೆ

| Updated By: Digi Tech Desk

Updated on: Feb 09, 2022 | 2:54 PM

IPL 2022: ಐಪಿಎಲ್ 2022 ರಿಂದ ಹೊಸ ತಂಡವಾಗಿ ಐಪಿಎಲ್​ಗೆ ಸೇರಿರುವ ಅಹಮದಾಬಾದ್ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಪ್ರಕಟಿಸಿದೆ. ಈ ತಂಡದ ಹೆಸರನ್ನು ಗುಜರಾತ್ ಟೈಟಾನ್ಸ್ ಎಂದು ಹೆಸರಿಸಲಾಗಿದೆ.

IPL 2022: ಗುಜರಾತ್ ಟೈಟಾನ್ಸ್! ಅಹಮದಾಬಾದ್ ಫ್ರಾಂಚೈಸಿಯಿಂದ ತಂಡದ ಅಧಿಕೃತ ಹೆಸರು ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ಐಪಿಎಲ್ 2022 (IPL 2022) ರಿಂದ ಹೊಸ ತಂಡವಾಗಿ ಐಪಿಎಲ್​ಗೆ ಸೇರಿರುವ ಅಹಮದಾಬಾದ್ ಫ್ರಾಂಚೈಸಿ (Ahmedabad Franchise) ತನ್ನ ತಂಡದ ಹೆಸರನ್ನು ಪ್ರಕಟಿಸಿದೆ. ಈ ತಂಡದ ಹೆಸರನ್ನು ಗುಜರಾತ್ ಟೈಟಾನ್ಸ್ (Gujarat Titans) ಎಂದು ಹೆಸರಿಸಲಾಗಿದೆ. ಫೆಬ್ರವರಿ 9 ರಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತಂಡದ ಹೆಸರನ್ನು ಬಹಿರಂಗಪಡಿಸಲಾಯಿತು. ಅಹಮದಾಬಾದ್ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಆಡುತ್ತಿದೆ. ಈ ಹಿಂದೆ ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ ಇದೀಗ ಸರಿಯಾದ ಹೆಸರು ಹೊರಬಿದ್ದಿದೆ. ಈ ತಂಡದ ನಾಯಕ ಹಾರ್ದಿಕ್ ಪಾಂಡ್ಯ. CVC ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯ ಒಡೆತನವನ್ನು ಹೊಂದಿದೆ. ಅಹಮದಾಬಾದ್ ಹೊರತುಪಡಿಸಿ, ಲಕ್ನೋ ಫ್ರಾಂಚೈಸ್ ಐಪಿಎಲ್ 2022 ಅನ್ನು ಪ್ರವೇಶಿಸಿತು. ಈ ಫ್ರಾಂಚೈಸ್ ಲಕ್ನೋ ಸೂಪರ್ ಜೈಂಟ್ಸ್ ಹೆಸರನ್ನು ಆಯ್ಕೆ ಮಾಡಿದೆ. ಐಪಿಎಲ್ 2022 ರ ಹರಾಜಿಗೆ ಮುಂಚಿತವಾಗಿ ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಉಳಿಸಿಕೊಂಡಿದೆ. ಹಾರ್ದಿಕ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಇಂಗ್ಲೆಂಡ್‌ನ ವಿಕ್ರಮ್ ಸೋಲಂಕಿ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ಮಾಡಿದರೆ, ಆಶಿಶ್ ನೆಹ್ರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಅಲ್ಲದೆ, ಗ್ಯಾರಿ ಕರ್ಸ್ಟನ್ ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯನ್ನು 5625 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು.

ಗುಜರಾತ್ ಲಯನ್ಸ್ ತಂಡವು ಎರಡು ಆವೃತ್ತಿಗಳನ್ನು ಆಡಿತ್ತು
ಇದಕ್ಕೂ ಮೊದಲು ಗುಜರಾತ್ ತಂಡ 2016 ಮತ್ತು 2017ರಲ್ಲಿ ಐಪಿಎಲ್‌ನಲ್ಲಿ ಆಡಿತ್ತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅಮಾನತುಗೊಂಡ ನಂತರ ಪುಣೆ ಮತ್ತು ರಾಜ್‌ಕೋಟ್‌ನ ಫ್ರಾಂಚೈಸಿಗಳನ್ನು ಐಪಿಎಲ್​ನಲ್ಲಿ ಆಡಿಸಲಾಯಿತು. ಆ ಸಮಯದಲ್ಲಿ ರಾಜ್‌ಕೋಟ್ ಫ್ರಾಂಚೈಸ್ ಗುಜರಾತ್ ಲಯನ್ಸ್ ಎಂಬ ಹೆಸರಿನಲ್ಲಿ ಕಣಕ್ಕಿಳಿದಿತ್ತು. ಈ ತಂಡದ ನಾಯಕ ಸುರೇಶ್ ರೈನಾ ಆಗಿದ್ದರು. ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ಈ ತಂಡದ ಭಾಗಿಯಾಗಿದ್ದರು. ಈ ತಂಡ ಐಪಿಎಲ್ 2016ರ ಪ್ಲೇಆಫ್ ತಲುಪಿತ್ತು.

ಲಕ್ನೋ ತಂಡವೂ ಐಪಿಎಲ್‌ನ ಭಾಗವಾಗಿದೆ

ಅಹಮದಾಬಾದ್ ಹೊರತುಪಡಿಸಿ, ಲಕ್ನೋ ಫ್ರಾಂಚೈಸಿ ಕೂಡ ಐಪಿಎಲ್‌ನ ಭಾಗವಾಗಿದೆ. ಇದು ಸಂಜೀವ್ ಗೋಯೆಂಕಾ ಅವರ ಒಡೆತನದಲ್ಲಿದೆ. ಈ ಫ್ರಾಂಚೈಸ್ ಲಕ್ನೋ ಸೂಪರ್ ಜೈಂಟ್ಸ್ ಎಂಬ ಹೆಸರಿನೊಂದಿಗೆ ಐಪಿಎಲ್ ಕಣಕ್ಕಿಳಿದಿದೆ. ಈ ತಂಡ ಖರೀದಿಸಲು ಅವರು 7090 ಕೋಟಿ ರೂ ವ್ಯಯಿಸಿದ್ದರು. ಈ ತಂಡ ಕೆಎಲ್ ರಾಹುಲ್, ಮಾರ್ಕಸ್ ಸ್ಟೋನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಗೌತಮ್ ಗಂಭೀರ್ ಈ ತಂಡದ ಮಾರ್ಗದರ್ಶಕರಾಗಿದ್ದರೆ, ಆಂಡಿ ಫ್ಲವರ್ ಮತ್ತು ವಿಜಯ್ ದಹಿಯಾ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ. ಕುತೂಹಲಕಾರಿಯಾಗಿ, ಸಂಜೀವ್ ಗೋಯೆಂಕಾ ಅವರು 2016-2017ರಲ್ಲಿ ಐಪಿಎಲ್‌ನ ಭಾಗವಾಗಿದ್ದರು. ಅವರು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಒಡೆತನ ಹೊಂದಿದ್ದರು.

Published On - 2:03 pm, Wed, 9 February 22