
ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (GT vs SRH) ನಡುವಿನ ಐಪಿಎಲ್ 2025 ರ (IPL 2025) 51 ನೇ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಬರೋಬ್ಬರಿ 225 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 186 ರನ್ ಕಲೆಹಾಕಲಷ್ಟೇ ಶಕ್ತವಾಗಿ 38 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಗುಜರಾತ್ ತಂಡ ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಇತ್ತ ಹೈದರಾಬಾದ್ ತಂಡ 7ನೇ ಸೋಲಿನೊಂದಿಗೆ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 225 ರನ್ ಕಲೆಹಾಕಿತು. ಆರಂಭಿಕರಾದ ಗಿಲ್ ಮತ್ತು ಸುದರ್ಶನ್ ಮತ್ತೊಮ್ಮೆ ಗುಜರಾತ್ ತಂಡಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 87 ರನ್‌ಗಳನ್ನು ಸೇರಿಸಿದರು. ಗಿಲ್ ಮತ್ತು ಸುದರ್ಶನ್ ಅವರ ಅದ್ಭುತ ಬ್ಯಾಟಿಂಗ್ ಸಹಾಯದಿಂದ, ಗುಜರಾತ್ ಪವರ್‌ಪ್ಲೇನಲ್ಲಿ ತನ್ನ ಅತ್ಯಧಿಕ ಸ್ಕೋರ್ ದಾಖಲಿಸಿತು. ಇದರೊಂದಿಗೆ, ಸುದರ್ಶನ್ ಟಿ20ಯಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿ, ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಸುದರ್ಶನ್ ಅರ್ಧಶತಕ ಪೂರ್ಣಗೊಳಿಸಲು ಸಾಧ್ಯವಾಗದೆ 48 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಜೊತೆಯಾದ ಗಿಲ್ ಮತ್ತು ಬಟ್ಲರ್ ಉತ್ತಮ ಜೊತೆಯಾಟ ಕಟ್ಟಿದರು.
ನಾಯಕ ಗಿಲ್ ಅರ್ಧಶತಕ ಪೂರೈಸಿ ರನ್ ಔಟ್ ಆದರೆ, ಬಟ್ಲರ್ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್ ಮುಂದುವರಿಸಿ 31 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಬಟ್ಲರ್ ಔಟಾದಾಗ ಗುಜರಾತ್ ತಂಡದ ಸ್ಕೋರ್ 200 ದಾಟಿತ್ತು. ವಾಷಿಂಗ್ಟನ್ ಸುಂದರ್ ಕೂಡ 16 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 21 ರನ್‌ಗಳ ಕಾಣಿಕೆ ನೀಡಿದರೆ, ರಾಹುಲ್ ತೆವಾಟಿಯಾ ಕೂಡ ಐದನೇ ಎಸೆತದಲ್ಲಿ ಆರು ರನ್ ಗಳಿಸಿದರು. ಸನ್‌ರೈಸರ್ಸ್ ಪರ ಉನಾದ್ಕಟ್ ಹೊರತುಪಡಿಸಿ, ಕಮ್ಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದು ವಿಕೆಟ್ ಪಡೆದರು.
IPL 2025: ಬೆಂಗಳೂರಿನಲ್ಲಿ ಶನಿವಾರವೂ ಮಳೆ; ಆರ್ಸಿಬಿ- ಸಿಎಸ್ಕೆ ಪಂದ್ಯ ನಡೆಯುವುದು ಡೌಟ್..!
225 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡವು ಉತ್ತಮ ಆರಂಭವನ್ನು ಪಡೆಯಿತು. ಹೆಡ್ ಮತ್ತು ಅಭಿಷೇಕ್ ಮೊದಲ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟವನ್ನು ಪ್ರಸಿದ್ಧ್ ಕೃಷ್ಣ ಮುರಿದರು. ಅವರು 20 ರನ್ ಗಳಿಸಿದ್ದ ಹೆಡ್ ಅವರನ್ನು ಔಟ್ ಮಾಡಿದರು. ಆ ಬಳಿಕ ಬಂದ ಇಶಾನ್ ಕಿಶನ್ ಕೂಡ ತಮ್ಮ ಕಳಪೆ ಫಾರ್ಮ್ ಮುಂದುವರಿಸಿ ಕೇವಲ 13 ರನ್ ಗಳಿಸಿ ಔಟಾದರು. ಕ್ಲಾಸೆನ್ ಮತ್ತು ಅಭಿಷೇಕ್ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಈ ವೇಳೆ ಅಭಿಷೇಕ್ ಶರ್ಮಾ 41 ಎಸೆತಗಳಲ್ಲಿ 74 ರನ್ ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್‌ಗೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಕ್ಲಾಸೆನ್ 23 ರನ್ ಗಳಿಸಿ ಔಟಾದರೆ, ಅನಿಕೇತ್ 3 ರನ್ ಮತ್ತು ಮೆಂಡಿಸ್ ಖಾತೆ ತೆರೆಯದೆಯೇ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ