ಲೆಜೆಂಡ್ಸ್ ಕ್ರಿಕೆಟ್ ಲೀಗ್ ಕೂಟಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಒಮಾನ್ನ ಅಲ್ ಅಮೆರತ್ನಲ್ಲಿ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಕೈಫ್ ನಾಯಕತ್ವದ ಇಂಡಿಯಾ ಮಹಾರಾಜಾಸ್ ತಂಡ ಏಷ್ಯಾ ಲಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಆದರೆ, ಇದರ ಬೆನ್ನಲ್ಲೇ ಇಂಡಿಯಾ ತಂಡಕ್ಕೆ ಆಘಾತ ಉಂಟಾಗಿದೆ. ತಂಡದಲ್ಲಿದ್ದ ಸ್ಟಾರ್ ಸ್ಪಿನ್ನರ್, ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ಗೆ (Harbhajan Singh) ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. ಇವರು ಲೆಜೆಂಡ್ಸ್ ಕ್ರಿಕೆಟ್ ಲೀಗ್ನಲ್ಲಿ (Legends Cricket League) ಆಡುತ್ತಿದ್ದಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಇವರು ಆಡುವ ಬಳಗದಲ್ಲಿ ಇರಲಿಲ್ಲ. “ನನಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ನಾನೀಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಸಂಪರ್ಕದಲ್ಲಿ ಇದ್ದವರು ಆದಷ್ಟು ಬೇಗ ಪರೀಕ್ಷಿಸಿಕೊಳ್ಳುವಂತೆ ವಿನಂತಿಸುತ್ತೇನೆ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ,” ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.
I’ve tested positive for COVID with mild symptoms. I have quarantined myself at home and taking all the necessary precautions.
I would request those who came in contact with me to get themselves tested at the earliest. Please be safe and take care ??— Harbhajan Turbanator (@harbhajan_singh) January 21, 2022
ಹರ್ಭಜನ್ ಅವರ ಪತ್ನಿ ಗೀತಾ ಬಸ್ರಾ ಅವರಿಗೂ ಕೊರೊನಾ ಸೋಂಕು ತಗುಲಿದೆ. ಇವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, “ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಎರಡು ವರ್ಷಗಳ ಬಳಿಕ ಕೊನೆಗೂ ನನಗೆ ವೈರಸ್ ಅಂಟಿದೆ, ಕ್ವಾರಂಟೈನ್ ಆಗಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.
ಸದ್ಯ ಹರ್ಭಜನ್ ಅವರಿಗೆ ಕೊರೊನಾ ತಗುಲಿರುವುದರಿಂದ ಲೆಜೆಂಡ್ ಕ್ರಿಕೆಟ್ ಲೀಗ್ನಲ್ಲೂ ಆತಂಕ ಶುರುವಾಗಿದೆ. ಶುಕ್ರವಾರವಷ್ಟೆ ಲೀಗ್ಗೆ ಚಾಲನೆ ಸಿಕ್ಕಿತ್ತು. ಮೊದಲ ಪಂದ್ಯದಲ್ಲೇ ಇಂಡಿಯಾ ಮಹಾರಾಜಾಸ್ ತಂಡವು ಏಷ್ಯಾ ಲಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಏಷ್ಯನ್ ಲಯನ್ಸ್ ತಂಡ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ತಂಡಕ್ಕೆ ಉಪುಲ್ ತರಂಗ ಉತ್ತಮ ಆರಂಭ ನೀಡಿದರು. ತರಂಗ 66 ರನ್ ಗಳಿಸಿದರೆ, ನಾಯಕ ಮಿಸ್ಭಾ ಉಲ್ ಹಕ್ 44 ರನ್ ಗಳಿಸಿದರು. ಭಾರತದ ಪರ ಮನ್ಪ್ರೀತ್ ಗೋನಿ ಮೂರು ವಿಕೆಟ್ ಕಿತ್ತರೆ, ಇರ್ಫಾನ್ ಪಠಾನ್ ಎರಡು ವಿಕೆಟ್ ಪಡೆದರು. ಬಿನ್ನಿ ಮತ್ತು ಮುನಾಫ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ಒಂದು ಹಂತದಲ್ಲಿ 34 ರನ್ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಕೈಫ್ ಮತ್ತು ಯೂಸುಫ್ ಪಠಾಣ್ ನೆರವಾದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪಠಾಣ್ ಕೇವಲ 40 ಎಸೆತದಲ್ಲಿ 80 ರನ್ ಗಳಿಸಿದರು. ಐದು ಸಿಕ್ಸರ್ ಮತ್ತು 9 ಬೌಂಡರಿ ಬಾರಿಸಿದ ಯೂಸುಫ್ ರನ್ ಔಟಾದರು. ನಾಯಕ ಕೈಫ್ ಅಜೇಯ 42 ರನ್ ಗಳಿಸಿದರೆ, ಇರ್ಫಾನ್ ಪಠಾಣ್ 21 ರನ್ ಗಳಿಸಿ ಅಜೇಯರಾಗುಳಿದರು. ಇಂಡಿಯಾ ಮಹಾರಾಜಾಸ್ ತಂಡ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.
Axar Patel Engagement: ಹುಟ್ಟುಹಬ್ಬದ ದಿನ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಕ್ಷರ್ ಪಟೇಲ್: ಫೋಟೋ ವೈರಲ್
Published On - 12:34 pm, Fri, 21 January 22