ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (GT vs SRH) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಎಸೆತದ ವರೆಗೂ ರೋಚಕತೆ ಸೃಷ್ಟಿಸಿದ್ದು ಪಂದ್ಯದಲ್ಲಿ ಜಿಟಿ ತಂಡ 5 ವಿಕೆಟ್ಗಳ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ಸನ್‌ರೈಸರ್ಸ್ ತಂಡ ಯುವ ಆರಂಭಿಕ ಅಭಿಷೇಕ್ ಶರ್ಮ ಮತ್ತು ಏಡನ್ ಮಾರ್ಕ್ರಮ್ ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 195 ರನ್ ಪೇರಿಸಿತು. ಗುಜರಾತ್ ತಂಡ ವೃದ್ಧಿಮಾನ್ ಸಾಹ ಬಿರುಸಿನ ಆಟದಿಂದ ಉತ್ತಮ ಆರಂಭ ಪಡೆಯಿತು. ಕೊನೆಯಲ್ಲಿ ತೆವಾಟಿಯ-ರಶೀದ್ ಖಾನ್ (Rashid Khan) ಸ್ಫೋಟಕ ಆಟವಾಡಿ ಗೆಲುವಿನ ದಡ ಸೇರಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ರಶೀದ್ ಖಾನ್ ಏನು ಹೇಳಿದರು ಎಂಬುದನ್ನು ಕೇಳಿ.
ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, “ನಾನು ಡ್ರೆಸ್ಸಿಂಗ್ ರೂಮ್ನಲ್ಲಿ ತಮಾಷೆಗೆ, ನೀವು ತುಂಬಾ ಒಳ್ಳೆಯವರು ನಾನು ನಿಮಗೆ ಸಹಾಯ ಮಾಡುತ್ತೇನೆಂದು ದೇವರು ನಮ್ಮ ಬಳಿ ಹೇಳಿದ್ದಾನೆ ಎನ್ನುತ್ತಿದ್ದೆ. ನಮ್ಮ ತಂಡ ಸದಾ ಉತ್ಸಾಹದಿಂದ ಇರುತ್ತದೆ. ಆಟಗಾರರಿಗೆ ಏನು ಅಗತ್ಯವೊ ಅದನ್ನು ನೀಡುತ್ತಿದ್ದೇವೆ. ಇಲ್ಲಿ ಯಾರಿಗೂ ಯಾವುದೆ ಒತ್ತಡವಿಲ್ಲ. ಎಲ್ಲ ಕ್ರೆಡಿಟ್ ನಮ್ಮ ಸ್ಟಾಫ್ ಸಿಬ್ಬಂದಿಗಳಿಗೆ ಹೋಗಬೇಕು. ಅವರು ನಮ್ಮ ಆಟಗಾರನ್ನು ಉತ್ತಮವಾಗಿ ಸಂಬಾಳಿಸುತ್ತಿದ್ದಾರೆ. ನಮ್ಮ ಕ್ಯಾಂಪ್ನಲ್ಲಿ ಉತ್ತಮ ವೈಬ್ ಇದೆ. ಇದು ದೊಡ್ಡ ಟೂರ್ನಮೆಂಟ್ ಆಗಿರುವುದರಿಂದ ತಂಡಕ್ಕೆ ಎಲ್ಲಿ ನನ್ನ ಬೌಲಿಂಗ್ನ ಅಗತ್ಯವಿದೆಯೊ ಅಲ್ಲಿ ನಾನು ಬೌಲಿಂಗ್ ಮಾಡ್ತೇನೆ,” ಎಂದು ಹೇಳಿದ್ದಾರೆ.
ರಶೀದ್ ಖಾನ್ ಮಾತನಾಡಿ, “ಗೆಲುವು ಸಾಧಿಸಿದ್ದು ಖುಷಿಯಿದೆ. ಇದೊಂದು ಉತ್ತಮ ಭಾವನೆ. ಸನ್‌ರೈಸರ್ಸ್ ತಂಡಕ್ಕೆ ಬೌಲಿಂಗ್ ಮಾಡಿದ್ದು ಸಂತಸ ತಂದಿದೆ. ನಾನು ನನ್ನ ಆಟವನ್ನು ಆಡಿದೆಯಷ್ಟೆ. ನಾನು ಕಳೆದ ಎರಡು ವರ್ಷಗಳಿಂದ ಬ್ಯಾಟಿಂಗ್ನಲ್ಲಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದೆ. ಕೊನೆಯ ಓವರ್ನಲ್ಲಿ 22 ರನ್ಗಳು ಬೇಕಾಗಿದ್ದವು. ಆಗ ನಾನು ತೇವಾಟಿಯ ಬಳಿ ಹೇಳಿದೆ ನಾವು ಕೊನೆಯ ಓವರ್ನಲ್ಲಿ ಎದುರಾಳಿಗೆ 25 ರನ್ ಬಿಟ್ಟುಕೊಟ್ಟಿದ್ದೆವು. ಯಾವುದೇ ಕಾರಣಕ್ಕೂ ಧೃತಿಗೆಡಬೇಡ. ಯಾವುದೂ ಅಸಾಧ್ಯವಲ್ಲ. ನಿನ್ನ ಪೊಸಿಶನ್ಗೆ ಬಂದು ಜೋರಾಗಿ ಹೊಡಿ ಎಂಬುದು ನಮ್ಮ ಪ್ಲಾನ್ ಆಗಿತ್ತು. ನಾನು 4-5 ಕೆಟ್ಟ ಬೌಲಿಂಗ್ ಮಾಡಿದೆ. ಅದು ನನ್ನ ತಲೆಯಲ್ಲಿತ್ತು. ಈರೀತಿಯ ಸಂದರ್ಭದಲ್ಲಿ ನೀವು ಲೈನ್-ಲೆಂತ್ ಅನ್ನು ಮಿಸ್ ಮಾಡಬಾರದು,” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, “ಈ ಪಂದ್ಯದಿಂದ ಕೆಲವೊಂದು ಪಾಠ ಕಲಿತಿದ್ದೇವೆ. ಮುಂದಿನ ಪಂದ್ಯದಲ್ಲಿ ತಪ್ಪುಗಳು ಮರುಕಳಿಸಬಾರದು. ನಮ್ಮ ಟೀಮ್ನಲ್ಲಿ ಆರಂಭದ ದಿನಗಳಿಂದಲೂ ಉತ್ತಮ ವಾತಾವರಣವಿದೆ. ಎಲ್ಲ ಆಟಗಾರರು ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಾರೆ. ನಾಯಕನಿಂದ ಹಾಗೂ ತಂಡದ ಕೋಚ್ ಆಶೀಶ್ ನೆಹ್ರಾ ಅವರಿಂದ ಕೂಡ ಒಳ್ಳೆಯ ಬೆಂಬಲ ಸಿಗುತ್ತಿದೆ. ಈ ತಂಡದಲ್ಲಿರುವುದು ಅದೃಷ್ಟ. ಈ ಗೆಲುವಿನಿಂದ ಸಿಕ್ಕ ಎರಡು ಅಂಕ ಸಹಾಯವಾಗಿದೆ,” ಎಂಬುದು ರಶೀದ್ ಖಾನ್ ಮಾತು.
ಇನ್ನು ಸೋತ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, “ಇದೊಂದು ಅದ್ಭುತ ಪಂದ್ಯ. ಎರಡೂ ತಂಡಗಳು ಒಟ್ಟು 40 ಓವರ್ಗಳನ್ನು ಆಡಿವೆ. ಇದೊಂದು ನಮಗೆ ಉತ್ತಮ ಪಾಠ. ಶಶಾಂಕ್ ಸಿಂಗ್ ಉತ್ತಮ ಬ್ಯಾಟಿಂಗ್ ನಡೆಸಿದರು. ಉಮ್ರಾನ್ ಮಲಿಕ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಕ್ರೆಡಿಟ್ ಗುಜರಾತ್ಗೆ ಸಲ್ಲಬೇಕು. ರಶೀದ್ ಖಾನ್ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು,” ಎಂದು ಹೇಳಿದ್ದಾರೆ.
Rashid Khan: 6 ಎಸೆತಗಳಲ್ಲಿ 22 ರನ್: GT vs SRH ನಡುವಣ ಕೊನೆಯ ರೋಚಕ ಓವರ್ ಹೇಗಿತ್ತು ನೋಡಿ