Hardik Pandya: ಹಾರ್ದಿಕ್ ಪಾಂಡ್ಯ ಆಯ್ಕೆಯೇ ಮುಂಬೈ ಪಾಲಿಗೆ ಮುಳುವಾಗಬಹುದು..!

| Updated By: ಝಾಹಿರ್ ಯೂಸುಫ್

Updated on: Dec 17, 2023 | 11:12 AM

Hardik Pandya: ಹಾರ್ದಿಕ್ ಪಾಂಡ್ಯ ಎಂಟ್ರಿ ಸುದ್ದಿ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದರು. ಇನ್ನು ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ, ತಂಡದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಹಾರ್ಟ್ ಬ್ರೇಕ್​ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

Hardik Pandya: ಹಾರ್ದಿಕ್ ಪಾಂಡ್ಯ ಆಯ್ಕೆಯೇ ಮುಂಬೈ ಪಾಲಿಗೆ ಮುಳುವಾಗಬಹುದು..!
Hardik Pandya
Follow us on

ಮುಂಬೈ ಇಂಡಿಯನ್ಸ್ (Mumbai Indians) ತಂಡದ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಆಯ್ಕೆಯಾಗಿ ದಿನಗಳು ಕಳೆದಿವೆ. ಆದರೆ ಈ ಅಚ್ಚರಿಯ ಆಯ್ಕೆಯ ಬಿಸಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಏಕೆಂದರೆ ಇಲ್ಲಿ ಹಾರ್ದಿಕ್ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಪದಚ್ಯುತಿಗೊಳಿಸಿದ್ದಾರೆ. ಇದನ್ನು ಅರಗಿಸಿಕೊಳ್ಳಲು ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಅನೇಕ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಸೋಷಿಯಲ್ ಮೀಡಿಯಾ ಖಾತೆಗಳಿಂದ ವಿಮುಖರಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಮುಂಬೈ ತಂಡದ ಜೆರ್ಸಿ-ಕ್ಯಾಪ್​ಗಳನ್ನು ಸುಡುವ ಮೂಲಕ ತಮ್ಮ ಸಿಟ್ಟನ್ನು ತೋರ್ಪಡಿಸಿದ್ದಾರೆ.

ಮೇಲ್ನೋಟಕ್ಕೆ ಇದ್ಯಾವುದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎನ್ನಬಹುದು. ಆದರೆ ಹೊಸದಾಗಿ ಆಯ್ಕೆಯಾಗಿರುವ ನಾಯಕ ಮಾಡಿದ ಹಾರ್ದಿಕ್ ಪಾಂಡ್ಯನೇ ಮುಂಬೈ ಪಾಲಿಗೆ ಮುಳುವಾಗಬಹುದು. ಏಕೆಂದರೆ…

ಗಾಯಾಳು ಆಟಗಾರ: ಹಾರ್ದಿಕ್ ಪಾಂಡ್ಯ ಬಿಗ್ ಮ್ಯಾಚ್ ವಿನ್ನರ್ ಎಂಬುದರಲ್ಲಿ ಸಂಶಯವೇ ಬೇಡ. ಆದರೆ ಅವರು ಗಾಯ ಪೀಡಿತ ಆಟಗಾರ ಎಂಬುದು ನೆನಪಿರಲಿ. ಹಾರ್ದಿಕ್ ಪಾಂಡ್ಯ ಅವರ ವೃತ್ತಿಜೀವನದಲ್ಲಿ ಅರ್ಧ ಭಾಗವು ಗಾಯಗಳಿಗೆ ಬಲಿಯಾಗಿದೆ. 2023ರ ವಿಶ್ವಕಪ್‌ನಲ್ಲೂ ಇದು ಪುನರಾವರ್ತನೆಯಾಗಿತ್ತು. ಮಹತ್ವದ ಟೂರ್ನಿಯಲ್ಲಿ ಅವರು ಆಡಿದ್ದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅಂತಹ ಆಟಗಾರನನ್ನು ನಾಯಕನನ್ನಾಗಿ ಮಾಡುವುದು ಎರಡಲಗಿನ ಕತ್ತಿಯಂತೆ. ಇದರಿಂದ ಮುಂಬೈ ಇಂಡಿಯನ್ಸ್ ಮುಂದೆ ಪರಿಣಾಮ ಎದುರಿಸಬೇಕಾದೀತು.

ಹಂಗಾಮಿ ನಾಯಕನ ಅವಶ್ಯಕತೆ: ಮೇಲೆ ಹೇಳಿದಂತೆ ಹಾರ್ದಿಕ್ ಪಾಂಡ್ಯ ಸದಾ ಫಿಟ್​ನೆಸ್ ಸಮಸ್ಯೆಯಿಂದ ಬಳಲುವ ಆಟಗಾರ. ಹೀಗಾಗಿ ಮುಂಬೈ ಹಂಗಾಮಿ ನಾಯಕನನ್ನು ಕೂಡ ಆಯ್ಕೆ ಮಾಡಿಕೊಂಡಿರಬೇಕಾಗುತ್ತದೆ. ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಅದರಲ್ಲೂ ಹಂಗಾಮಿ ನಾಯಕರುಗಳು ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ ನಿದರ್ಶನಗಳು ತುಂಬಾ ವಿರಳ. ಹೀಗಾಗಿ ಹಾರ್ದಿಕ್ ಪಾಂಡ್ಯ ಫಿಟ್​ನೆಸ್ ಕೂಡ ಮುಂಬೈ ಇಂಡಿಯನ್ಸ್​ ಮೇಲೆ ಪರಿಣಾಮ ಬೀರಬಹುದು.

ಆಲ್​ರೌಂಡರ್ ಆಗಿ ಕಣಕ್ಕಿಳಿಯುತ್ತಾರಾ?: ಹಾರ್ದಿಕ್ ಪಾಂಡ್ಯ ಅವರ ಫಿಟ್​ನೆಸ್ ಅನ್ನು ಪರಿಗಣಿಸಿ, ಮುಂಬೈ ಇಂಡಿಯನ್ಸ್​ ಅವರನ್ನು ಆಲ್ ರೌಂಡರ್ ಆಗಿ ಕಣಕ್ಕಿಳಿಸಲಿದೆಯಾ ಎಂಬುದೇ ಮೊದಲ ಪ್ರಶ್ನೆ. ಏಕೆಂದರೆ ಗಾಯದ ಕಾರಣ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಪಾಂಡ್ಯ ಅವರನ್ನು 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡವೇ ಬಿಡುಗಡೆ ಮಾಡಿತ್ತು.

ಇದೀಗ ಗಾಯದ ಕಾರಣ ವಿಶ್ವಕಪ್​ನಿಂದ ಹೊರಗುಳಿದಿದ್ದರು. ಇದಾದ ಬಳಿಕ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಅವರು ಆಲ್​ರೌಂಡರ್ ಆಗಿ ಕಣಕ್ಕಿಳಿಯುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಅವರು ಬೌಲಿಂಗ್ ಮಾಡದಿದ್ದರೆ ಅದು ಕೂಡ ಮುಂಬೈ ಪ್ಲೇಯಿಂಗ್ ಇಲೆವೆನ್​ನ ಸಮತೋಲನದ ಮೇಲೆ ಪರಿಣಾಮ ಬೀರಲಿದೆ.

ತಂಡದಲ್ಲಿ ಒಗ್ಗಟ್ಟು ಇರಲಿದೆಯಾ?: ಹಾರ್ದಿಕ್ ಪಾಂಡ್ಯ ನಾಯಕನಾಗುವುದು ಮುಂಬೈ ಇಂಡಿಯನ್ಸ್ ಏಕತೆಗೆ ಅಪಾಯವನ್ನುಂಟು ಮಾಡಬಹುದು. ರೋಹಿತ್ ಶರ್ಮಾ ಲೆಜೆಂಡ್ ಆಟಗಾರ. ಹೀಗಾಗಿ ಅವರ ಮಾತುಗಳನ್ನು ಪ್ರತಿಯೊಬ್ಬ ಆಟಗಾರರು ಗೌರವಿಸುತ್ತಾರೆ. ಹೀಗಾಗಿಯೇ ಮುಂಬೈ ಇಂಡಿಯನ್ಸ್​ ತಂಡದಲ್ಲೂ ಒಗ್ಗಟ್ಟು ಕಾಣಿಸುತ್ತಿತ್ತು. ಆದರೆ ಪಾಂಡ್ಯ ವಿಷಯದಲ್ಲಿ ಇದು ಸಾಧ್ಯವೇ?

ಏಕೆಂದರೆ ತಂಡಕ್ಕೆ ಹಾರ್ದಿಕ್ ಪಾಂಡ್ಯ ಎಂಟ್ರಿ ಸುದ್ದಿ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದರು. ಇನ್ನು ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ, ತಂಡದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಹಾರ್ಟ್ ಬ್ರೇಕ್​ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಅಂದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಿರ್ಧಾರದಿಂದ ಆಟಗಾರರೂ ತೀವ್ರ ನಿರಾಶೆಗೊಂಡಿದ್ದಾರೆ. ಹೀಗಾಗಿಯೇ ಮುಂಬೈ  ತಂಡದ ಇತರೆ ಸ್ಟಾರ್​ ಆಟಗಾರರು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಒಪ್ಪಿಕೊಳ್ಳುತ್ತಾರೆಯೇ ಎಂಬುದೇ ದೊಡ್ಡ ಪ್ರಶ್ನೆ.

ಇದನ್ನೂ ಓದಿ: IPL: ಮುಂಬೈ ಇಂಡಿಯನ್ಸ್ ತಂಡದ 9 ಕ್ಯಾಪ್ಟನ್ಸ್​

ಫ್ಯಾನ್ಸ್​ಗೂ ನಿರಾಸೆ: ಮುಂಬೈ ಇಂಡಿಯನ್ಸ್​ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದು. ಆದರೆ ಈ ಜನಪ್ರಿಯತೆಗೆ ರೋಹಿತ್ ಶರ್ಮಾ ಅವರ ಕೊಡುಗೆ ಕೂಡ ಇದೆ. ಏಕೆಂದರೆ ಹಿಟ್​ಮ್ಯಾನ್ ಅವರನ್ನು ಇಷ್ಟಪಟ್ಟು ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇದರ ಬೆನ್ನಲ್ಲೇ ಲಕ್ಷಾಂತರ ಅಭಿಮಾನಿಗಳು ಮುಂಬೈ ಇಂಡಿಯನ್ಸ್​ನ ಸೋಷಿಯಲ್​ ಮೀಡಿಯಾ ಖಾತೆಗಳನ್ನು ಅನ್​ಫಾಲೋ ಮಾಡಿದ್ದಾರೆ. ಈ ಆಕ್ರೋಶದ ಮತ್ತೊಂದು ಮಜಲು ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳ ವೇಳೆ ಸ್ಡೇಡಿಯಂನಲ್ಲಿ ಕಂಡು ಬರುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಮುಂಬೈ ಇಂಡಿಯನ್ಸ್ ಪಾಲಿಗೆ ಮುಳುವಾಗಬಹುದು.

 

Published On - 11:07 am, Sun, 17 December 23