
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ ಕಲೆಹಾಕಿದ್ದು 147 ರನ್ಗಳು ಮಾತ್ರ. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡವು ಎದುರಿಸಿದ ಹಿನ್ನಡೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ತಪ್ಪುಗಳೇ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ನಮ್ಮ ತಂಡವು ನಿರೀಕ್ಷಿತ ಮೊತ್ತಕ್ಕಿಂತ ಸುಮಾರು 20 ರನ್ ಕಡಿಮೆ ಗಳಿಸಿತು. ಮೊದಲ 6 ಓವರ್ಗಳ ಅವಧಿಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ತಾವಾಗಲಿ ಅಥವಾ ತಿಲಕ್ ವರ್ಮಾ ಅವರಾಗಲಿ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿದು ದೊಡ್ಡ ಜೊತೆಯಾಟ ಆಡಿದ್ದರೆ, ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಇರುತ್ತಿತ್ತು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಐಪಿಎಲ್ ಪಂದ್ಯಗಳು ಸಂಪೂರ್ಣವಾಗಿ ಬ್ಯಾಟರ್‌ಗಳ ಪರವಾಗಿರುತ್ತಿದ್ದು, ಬೌಲರ್‌ಗಳು ಅಸಹಾಯಕರಾಗುತ್ತಿದ್ದಾರೆ. ಆದರೆ, ಈ ಪಂದ್ಯದ ಪಿಚ್ ಬೌಲರ್‌ಗಳಿಗೂ ಸ್ವಲ್ಪ ಸಹಾಯ ಮಾಡಿತು. ಇಂತಹ ಸವಾಲಿನ ಪಿಚ್‌ಗಳಲ್ಲಿ ಆಡುವುದನ್ನು ತಾವು ಇಷ್ಟಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.
ಇದು ಬ್ಯಾಟರ್‌ಗಳು ಉತ್ತಮ ಕ್ರಿಕೆಟ್ ಆಡಿ ರನ್ ಗಳಿಸುವಂತೆ ಪ್ರೇರೇಪಿಸುತ್ತದೆ ಮತ್ತು ಪಂದ್ಯದಲ್ಲಿ ಸಮಬಲದ ಪೈಪೋಟಿ ತರುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದೆ ಎಂದು ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನು ಗೆಲ್ಲಬೇಕಾದರೆ ಸಿಗುವ ಅವಕಾಶಗಳನ್ನೂ ಬಳಸಿಕೊಳ್ಳಬೇಕು. ಆದರೆ, ಈ ಪಂದ್ಯದಲ್ಲೂ ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ, ಪಂದ್ಯದುದ್ದಕ್ಕೂ ಎದುರಾಳಿ ತಂಡವನ್ನು ಬೆನ್ನಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು. ಫೀಲ್ಡಿಂಗ್ ತಪ್ಪುಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ನಮ್ಮ ತಂಡ ಈ ಬಾರಿಯ ಹೆಚ್ಚಿನ ಪಂದ್ಯಗಳನ್ನು ಸೋತಿರುವುದು ಬ್ಯಾಟಿಂಗ್ ವೈಫಲ್ಯ ಮತ್ತು ಕಳಪೆ ಫೀಲ್ಡಿಂಗ್ನಿಂದ. ಅದು ಈ ಪಂದ್ಯದಲ್ಲೂ ಮುಂದುವರೆದಿದೆ. ಅಂದರೆ ನಮ್ಮ ಸೋಲಿನ ಕಾರಣ ಬದಲಾಗಿಲ್ಲ. ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಮ್ಯಾಚ್ನಲ್ಲಿ ಗೆದ್ದು, ಗೆಲುವಿನೊಂ ಸೀಸನ್ ಮುಗಿಸಲು ಬಯಸಿದೆ. ಮುಂದಿನ ಪಂದ್ಯವು’ESA – Education and Sports for All ಯೋಜನೆಯಡಿ ನಡೆಯಲಿದ್ದು, ಕ್ರೀಡಾಂಗಣಕ್ಕೆ ಬರಲಿರುವ 25,000 ಬಡ ಮತ್ತು ವಿಶೇಷ ಮಕ್ಕಳಿಗೆ ಉತ್ತಮ ಮನರಂಜನೆ ನೀಡುವುದು ನಮ್ಮ ಗುರಿಯಾಗಿದೆ. ಅವರ ಮುಖದಲ್ಲಿ ನಗು ಮೂಡಿಸಿ, ಅವರಿಗೊಂದು ಜೀವಮಾನದ ನೆನಪು ನೀಡುವುದಾಗಿ ಹಾರ್ದಿಕ್ ಪಾಂಡ್ಯ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದ ಮನೀಶ್ ಪಾಂಡೆ
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ತಂಡದ ಈ ಸೀಸನ್‌ನ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರ ಮಾತುಗಳೇ ಸ್ಪಷ್ಟಪಡಿಸುತ್ತವೆ. ಪವರ್‌ಪ್ಲೇನಲ್ಲಿನ ವಿಕೆಟ್ ಕುಸಿತ, ನಿರಂತರ ಕ್ಯಾಚ್ ಕೈಚೆಲ್ಲುವಿಕೆ ಮತ್ತು ಪ್ರಮುಖ ಸಂದರ್ಭಗಳಲ್ಲಿ ಜೊತೆಯಾಟದ ಕೊರತೆಯೇ ತಂಡದ ಹಿನ್ನಡೆಗೆ ಮುಖ್ಯ ಕಾರಣಗಳಾಗಿವೆ.
ಅಲ್ಲದೆ ಈ ಹಿಂದಿನತಪ್ಪುಗಳಿಂದ ಪಾಠ ಕಲಿತು ಮುನ್ನಡೆಯುವ ಭರವಸೆ ಹೊಂದಿರುವ ಮುಂಬೈ ತಂಡ, ತನ್ನ ಮುಂದಿನ ಇಎಸ್‌ಎ (ESA) ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ಬರಲಿರುವ ಸಾವಿರಾರು ಮಕ್ಕಳನ್ನು ರಂಜಿಸಿ, ಸೀಸನ್ ಅನ್ನು ಸಕಾರಾತ್ಮಕವಾಗಿ ಮತ್ತು ಗೆಲುವಿನೊಂದಿಗೆ ಮುಗಿಸುವ ತವಕದಲ್ಲಿದೆ.