ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿರುವ ಸಂದರ್ಭ ದೊಡ್ಡ ಆಘಾತ ಉಂಟಾಗಿದೆ. ಇಂಜುರಿಯಿಂದ ಬಳಲುತ್ತಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇವರ ಜಾಗಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರನ್ನು ಬದಲಿ ಆಟಗಾರನಾಗಿ ನೇಮಿಸಲಾಗಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಗಾಯಕ್ಕೆ ತುತ್ತಾಗಿದ್ದರು.
ಭಾರತದ ನಾಲ್ಕನೇ ಪಂದ್ಯದಲ್ಲಿ ಹಾರ್ದಿಕ್ ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಮಾಡುವಾಗ, ಸ್ಟ್ರೈಟ್ ಡ್ರೈವ್ ಅನ್ನು ನಿಲ್ಲಿಸಲು ಪ್ರಯತ್ನಿಸುವ ಬರದಲ್ಲಿ ಎಡಗಾಲಿನ ನೋವಿಗೆ ತುತ್ತಾದರು. ಹೀಗಾಗಿ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಯಿತು. ಆದರೆ, ಸದ್ಯದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಟೂರ್ನಿಯಿಂದಲೇ ಔಟ್ ಆಗಿದ್ದು, ಇವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.
India’s star all-rounder to miss the remainder of #CWC23.
Details 👇https://t.co/oE1Fh9e5hG
— ICC (@ICC) November 4, 2023
ಇಂಜುರಿಗೆ ತುತ್ತಾದ ಬಳಿಕ ಹಾರ್ದಿಕ್ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ತೆರಳಿದ್ದರು. ವರದಿಯಲ್ಲಿ ಪಾಂಡ್ಯ ಕಾಲಿನಲ್ಲಿ ಯಾವುದೇ ಒತ್ತಡ ಅಥವಾ ಮುರಿತ ಕಂಡುಬರದಿದ್ದರೂ, ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡರೆ ಉತ್ತಮ ಎಂಬ ಮಾತು ಬಿಸಿಸಿಐ ಮೂಲಗಳಿಂದ ಬಂದಿತ್ತು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ಅಥವಾ ಸೆಮಿ ಫೈನಲ್ನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯದ ಪ್ರಮಾಣ ದೊಡ್ಡದಿರುವ ಕಾರಣ ಹಾಗೂ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಾಗಿರುವುದರಿಂದ ಪಾಂಡ್ಯ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇದೇ ದಿನ ವಿರಾಟ್ ಕೊಹ್ಲಿಯ ಹುಟ್ಟುಹಬ್ಬ ಕೂಡ ಆಗಿರುವುದರಿಂದ, ಈ ಪಂದ್ಯ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ. ಪ್ರಸಿದ್ಧ ಕೃಷ್ಣ ತಂಡ ಸೇರಿಕೊಂಡರೂ ಇವರಿಗೆ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸ್ಥಾನ ಸಿಗುವುದು ಅನುಮಾನ. ಯಾಕೆಂದರೆ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಇನ್ನಷ್ಟು ಮಾಹಿತಿಗೆ ನಿರೀಕ್ಷಿಸಿ…
Published On - 9:15 am, Sat, 4 November 23