ಮುಂಬೈನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್ ಪಾಂಡ್ಯ; ಶ್ರೀಲಂಕಾ ವಿರುದ್ಧ ಕಣಕ್ಕೆ..?
Hardik Pandya, ICC World Cup 2023: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಳಗಾಗಿ ಪ್ರಸ್ತುತ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಉಪ ನಾಯಕ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇರುವುದು ಖಚಿತವಾಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಳಗಾಗಿ ಪ್ರಸ್ತುತ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಉಪ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇರುವುದು ಖಚಿತವಾಗಿದೆ. ನವೆಂಬರ್ 02 ರ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಭಾರತ ತಂಡ, ಶ್ರೀಲಂಕಾ ವಿರುದ್ಧ (India vs Sri Lanka) ಮುಂದಿನ ಪಂದ್ಯವನ್ನು ಆಡಲಿದ್ದು, ಈ ಪಂದ್ಯಕ್ಕೆ ಹಾರ್ದಿಕ್ ಲಭ್ಯರಿದ್ದಾರೆ ಎಂದು ವರದಿಯಾಗಿದೆ. ಒಂದು ಮೂಲದ ಪ್ರಕಾರ ಪಾಂಡ್ಯ ಮುಂಬೈನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಕ್ಟೋಬರ್ 19ರಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ತಮ್ಮ ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು.
ಮುಂಬೈನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ವಿಶ್ವಾಸಾರ್ಹ ಮೂಲವೊಂದು, ‘ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಶ್ರೀಲಂಕಾ ವಿರುದ್ಧ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಸ್ತುತ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ, ಆದರೆ ಅವರು ತಂಡವನ್ನು ಸೇರಲು ಸಿದ್ಧರಾಗಿದ್ದಾರೆ ಎಂದು ವರದಿ ಮಾಡಿದೆ.
ICC World Cup 2023: ಪಾಕಿಸ್ತಾನ ತಂಡಕ್ಕೆ ಇನ್ನೂ ಇದೆ ಸೆಮಿಫೈನಲ್‌ಗೇರುವ ಅವಕಾಶ..!
ಹಾರ್ದಿಕ್ ಅನುಪಸ್ಥಿತಿಯಲ್ಲಿ 2 ಬದಲಾವಣೆ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ, ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿತ್ತು. ಮೊದಲನೆಯದಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ, ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಹಾಗೂ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆ ಮಾಡಲಾಗಿತ್ತು. ಈ ಎರಡೂ ಬದಲಾವಣೆಗಳು ತಂಡಕ್ಕೆ ಉತ್ತಮ ಫಲಿತಾಂಶ ನೀಡಿದ್ದವು.
ಮಿಂಚಿದ ಶಮಿ ಮತ್ತು ಸೂರ್ಯ
ಹಾರ್ದಿಕ್ ಪಾಂಡ್ಯ ಬದಲಿಗೆ ತಂಡವನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 2 ರನ್ ಗಳಿಸಿ ರನೌಟ್ ಆಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಅದರಲ್ಲೂ ಲಕ್ನೋದಂತಹ ಕಷ್ಟಕರವಾದ ಪಿಚ್‌ನಲ್ಲಿ ಸೂರ್ಯ 49 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದರು. ಸೂರ್ಯ ಜೊತೆಗೆ ಮೊಹಮ್ಮದ್ ಶಮಿ ಕೂಡ ಆಡಿರುವ ಎರಡೂ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದುಕೊಂಡಿದ್ದ ಶಮಿ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ 4 ವಿಕೆಟ್ ಕಬಳಿಸಿದ್ದರು.
ಟೀಂ ಇಂಡಿಯಾ ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ. ಇದಾದ ಬಳಿಕ ಭಾರತದ ಮುಂದಿನ ಪಂದ್ಯ ನವೆಂಬರ್ 5 ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಪ್ರಸ್ತುತ ಭಾರತ ಆಡಿದ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 am, Wed, 1 November 23