ಭಾರತ-ಅಫ್ಘಾನಿಸ್ತಾನ್ (India vs Afghanistan) ನಡುವಣ ಟಿ20 ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಹೊರಗುಳಿಯಲಿದ್ದಾರೆ. ಫಿಟ್ನೆಸ್ ಸಮಸ್ಯೆಯ ಕಾರಣ ಮುಂಬರುವ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದಾಗ್ಯೂ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವುದು ಖಚಿತ ಎಂದು ವರದಿಯಾಗಿದೆ.
ಈ ಬಾರಿ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಪಾದದ ಗಾಯಕ್ಕೆ ತುತ್ತಾಗಿದ್ದ ಪಾಂಡ್ಯ ಆ ಬಳಿಕ ಯಾವುದೇ ಪಂದ್ಯವಾಡಿಲ್ಲ. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.
ಇದಾಗ್ಯೂ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಟಿ20 ಸರಣಿಯಿಂದ ಹೊರಗುಳಿಯಲು ಪಾಂಡ್ಯ ನಿರ್ಧರಿಸಿದ್ದಾರೆ. ಅಲ್ಲದೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಗಾಯಗೊಂಡಿದ್ದರು. ಮೊಣಕಾಲಿನ ಗಾಯದ ಸಮಸ್ಯೆಗೆ ಒಳಗಾಗಿರುವ ಸೂರ್ಯ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ರುತುರಾಜ್ ಗಾಯಕ್ವಾಡ್ ಫಿಟ್ನೆಸ್ ಹೊಂದಿದ್ದರೆ ಮಾತ್ರ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಲಿದ್ದಾರೆ.
ಭಾರತ-ಅಫ್ಘಾನಿಸ್ತಾನ್ ನಡುವಣ ಟಿ20 ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯನ್ನು ಮೊಹಾಲಿ, ಇಂದೋರ್ ಹಾಗೂ ಬೆಂಗಳೂರಿನಲ್ಲಿ ಆಡಲಾಗುತ್ತದೆ. ಅದರಂತೆ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಜನವರಿ 11- ಮೊದಲ ಟಿ20 ಪಂದ್ಯ (ಮೊಹಾಲಿ)
ಜನವರಿ 14- ಎರಡನೇ ಟಿ20 ಪಂದ್ಯ (ಇಂದೋರ್)
ಜನವರಿ 17- ಮೂರನೇ ಟಿ20 ಪಂದ್ಯ (ಬೆಂಗಳೂರು)
ಈ ಬಾರಿಯ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದೆರಡು ಸೀಸನ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಪಾಂಡ್ಯರನ್ನು ಟ್ರೇಡ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್ ಖರೀದಿಸಿದೆ.
ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಅದರಂತೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್ ,ರೊಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್. ಜೆರಾಲ್ಡ್ ಕೋಟ್ಝಿ , ದಿಲ್ಶನ್ ಮಧುಶಂಕ , ಶ್ರೇಯಸ್ ಗೋಪಾಲ್ , ನುವಾನ್ ತುಷಾರ , ನಮನ್ ಧೀರ್ , ಅನ್ಶುಲ್ ಕಾಂಬೋಜ್ , ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.