ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಆಕರ್ಷಕ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 107 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಕೆಳ ಕ್ರಮಾಂಕದ ಬ್ಯಾಟರ್ಗಳ ಜೊತೆಗೂಡಿ ಇನಿಂಗ್ಸ್ ಕಟ್ಟಿದ ರಾಹುಲ್ ಮೊದಲ ದಿನದಾಟದ ಮುಕ್ತಾಯದ ವೇಳೆ 70 ರನ್ಗಳಿಸಿ ಅಜೇಯರಾಗಿ ಉಳಿದರು.
2ನೇ ದಿನದಾಟದಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ 133 ಎಸೆತಗಳಲ್ಲಿ 14 ಫೋರ್ ಹಾಗೂ 4 ಭರ್ಜರಿ ಸಿಕ್ಸ್ಗಳೊಂದಿಗೆ ಶತಕ ಪೂರೈಸಿದರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಮೊತ್ತವನ್ನು 245 ರನ್ಗಳಿಗೆ ತಂದು ನಿಲ್ಲಿಸಿದರು.
ಈ ಭರ್ಜರಿ ಶತಕದೊಂದಿಗೆ ಸೆಂಚುರಿಯನ್ ಮೈದಾನದಲ್ಲಿ 2 ಸೆಂಚುರಿ ಸಿಡಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ದಾಖಲೆ ಕೆಎಲ್ ರಾಹುಲ್ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ರಾಹುಲ್ ಇದೇ ಮೈದಾನದಲ್ಲಿ ಶತಕ ಬಾರಿಸಿದ್ದರು.
ಇದೀಗ ಮತ್ತೊಮ್ಮೆ ಮೂರಂಕಿ ರನ್ಗಳಿಸುವ ಮೂಲಕ ಸೆಂಚುರಿಯಲ್ಲಿ 2 ಸೆಂಚುರಿ ಸಿಡಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೆಯೇ SENA ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ 2ನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಇನ್ನು ಕೆಎಲ್ ರಾಹುಲ್ (101) ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 245 ರನ್ ಕಲೆಹಾಕಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ತಂಡವು 5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 14 ರನ್ ಕಲೆಹಾಕಿದೆ.
Published On - 3:25 pm, Wed, 27 December 23