Hardik Pandya: ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್ ನೀಡಿದ ಗೌತಮ್ ಗಂಭೀರ್

|

Updated on: Jul 21, 2024 | 11:55 AM

Hardik Pandya: ಹಾರ್ದಿಕ್ ಪಾಂಡ್ಯ 2023ರ ಏಕದಿನ ವಿಶ್ವಕಪ್​ನಲ್ಲಿ 10 ಓವರ್​ಗಳನ್ನು ಎಸೆಯಲು ವಿಫಲರಾಗಿದ್ದರು. ಅದರಲ್ಲೂ ಬೌಲಿಂಗ್ ಮಾಡುವ ವೇಳೆಯೇ ಅವರು ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರ ನಡೆದಿದ್ದರು. ಅಷ್ಟೇ ಅಲ್ಲದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಕೂಡ ಹಾರ್ದಿಕ್ ವೈಯುಕ್ತಿಕ ಕಾರಣಗಳನ್ನು ನೀಡಿ ಹೊರಗುಳಿದಿದ್ದಾರೆ.

Hardik Pandya: ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್ ನೀಡಿದ ಗೌತಮ್ ಗಂಭೀರ್
Hardik Pandya
Follow us on

ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ನೀಡಿದ್ದರು. ಈ ಆಘಾತದ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಲು ಭಾರತ ತಂಡದ ಮುಖ್ಯ ಕೋಚ್ ನಿರ್ಧರಿಸಿದ್ದಾರೆ.
ಅದೇನೆಂದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಬೇಕಿದ್ದರೆ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೆರೆದಿಡಬೇಕು. ಆದರೆ ಅದು ಟೀಮ್ ಇಂಡಿಯಾ ಪರ ಕಣಕ್ಕಿಳಿದಲ್ಲ.  ಬದಲಾಗಿ ಡಿಸೆಂಬರ್​ನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯ ಮೂಲಕ ಎಂಬುದು ಇಲ್ಲಿ ವಿಶೇಷ.

ಅಂದರೆ ಹಾರ್ದಿಕ್ ಪಾಂಡ್ಯ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ವಿಜಯ ಹಝಾರೆ ಟೂರ್ನಿಯ ಪಂದ್ಯಗಳಲ್ಲಿ ಸಂಪೂರ್ಣ 10 ಓವರ್​ಗಳನ್ನು ಬೌಲಿಂಗ್ ಮಾಡಬೇಕು. ಅಂದರೆ ಮಾತ್ರ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಕಳೆದ ಏಕದಿನ ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ಸಂಪೂರ್ಣ 10 ಓವರ್​ಗಳನ್ನು ಎಸೆಯಲು ವಿಫಲರಾಗಿದ್ದರು. ಅದರಲ್ಲೂ ಬೌಲಿಂಗ್ ಮಾಡುವ ವೇಳೆಯೇ ಅವರು ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರ ನಡೆದಿದ್ದರು. ಅಷ್ಟೇ ಅಲ್ಲದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಕೂಡ ಹಾರ್ದಿಕ್ ವೈಯುಕ್ತಿಕ ಕಾರಣಗಳನ್ನು ನೀಡಿ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬೌಲಿಂಗ್ ಸಾಮರ್ಥ್ಯದ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ದೇಶೀಯ ಟೂರ್ನಿಯ ಮೂಲಕ ಭಾರತ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡುವಂತೆ ಹಾರ್ದಿಕ್ ಪಾಂಡ್ಯಗೆ ತಿಳಿಸಲಾಗಿದೆ.

ಅದರಂತೆ ಚಾಂಪಿಯನ್ಸ್ ಟ್ರೋಫಿ 2025 ಕ್ಕಿಂತ ಮುಂಚಿತವಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಜಯ್ ಹಝಾರೆ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಫಿಟ್‌ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಆ ಬಳಿಕವಷ್ಟೇ ಅವರನ್ನು ಏಕದಿನ ತಂಡಕ್ಕೆ ಆಲ್​ರೌಂಡರ್ ಆಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹೀಗಾಗಿ ಫೆಬ್ರವರಿ 2025 ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ, ದೇಶೀಯ ಏಕದಿನ ಕ್ರಿಕೆಟ್​ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಲೇಬೇಕು. ಇಲ್ಲದಿದ್ದರೆ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಮುಂದಿನ ವಿಜಯ ಹಝಾರೆ ಟೂರ್ನಿಯು ಹಾರ್ದಿಕ್ ಪಾಂಡ್ಯ ಪಾಲಿಗೆ ಅಗ್ನಿ ಪರೀಕ್ಷೆ ಆಗಿರಲಿದೆ.

ಇದನ್ನೂ ಓದಿ: IPL 2025: RCB ತಂಡಕ್ಕೆ ಕೆಎಲ್ ರಾಹುಲ್ ರಿಎಂಟ್ರಿ?

ಕೇವಲ 6 ಏಕದಿನ ಪಂದ್ಯಗಳು;

2025 ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಕೇವಲ 6 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಇನ್ನುಳಿದಿರುವುದು ಟಿ20 ಮತ್ತು ಟೆಸ್ಟ್ ಪಂದ್ಯಗಳು. ಹೀಗಾಗಿ ಡಿಸೆಂಬರ್​ನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.