ಸತತ ಸೋಲುಗಳಿಂದ ಕಂಗೆಟ್ಟಿದ್ದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಮಣಿಸಿ ಲೀಗ್ನಲ್ಲಿ ಚೊಚ್ಚಲ ಗೆಲುವನ್ನು ಸಂಪಾಧಿಸಿತ್ತು. ಈ ಗೆಲುವು ನಾಯಕ ಹಾರ್ದಿಕ್ ಪಾಂಡ್ಯಗೆ ಕೊಂಚ ನಿರಾಳ ತಂದಿತ್ತು. ಏಕೆಂದರೆ ಸಾಕಷ್ಟು ವಿರೋಧದ ನಡುವೆಯೂ ಮುಂಬೈ ತಂಡದ ಸಾರಥ್ಯ ವಹಿಸಿಕೊಂಡಿದ್ದ ಪಾಂಡ್ಯ ಸಾಕಷ್ಟು ಟ್ರೋಲಿಂಗ್‌ಗೆ ಒಳಗಾಗಿದ್ದರು. ನಂತರ ಸೀಸನ್ ಆರಂಭವಾದ ಬಳಿಕ ಮುಂಬೈ ಇಂಡಿಯನ್ಸ್ (Mumbai Indians) ಆಡಿದ ಮೊದಲ ಎಲ್ಲಾ ಮೂರು ಪಂದ್ಯಗಳನ್ನು ಸೋತು ಹ್ಯಾಟ್ರಿಕ್ ಸೋಲು ಕಂಡಿತ್ತು. ಸದ್ಯ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದು ನಿಟ್ಟುಸಿರು ಬಿಟ್ಟಿದ್ದ ಪಾಂಡ್ಯಗೆ ತನ್ನ ಸಹೋದರನಿಂದಲೇ ಕೋಟ್ಯಾಂತರ ರೂಪಾಯಿ ವಂಚನೆಯಾಗಿದೆ.
ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿರುವ ಹಾರ್ದಿಕ್ ಪಾಂಡ್ಯ ಸಹೋದರರು ಕ್ರಿಕೆಟ್ ಹೊರತಾಗಿ ಬೇರೆ ಕ್ಷೇತ್ರಗಳಲ್ಲೂ ಉದ್ದಿಮೆ ನಡೆಸುತ್ತಿದ್ದಾರೆ. ಅದರಲ್ಲಿ ಒಂದು ಪಾಲಿಮರ್ ವ್ಯವಹಾರ. ಈ ವ್ಯವಹಾರದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಜೊತೆಗೆ ಅವರ ಹಿರಿಯ ಸೋದರ ಸಂಬಂಧಿ ವೈಭವ್ ಪಾಂಡ್ಯ ಕೂಡ ಷೇರುಗಳನ್ನು ಹೊಂದಿದ್ದರು. ಆದರೆ ಪಾಂಡ್ಯ ಸಹೋದರರಿಗೆ ಈ ವ್ಯವಹಾರದಲ್ಲಿ ತಮ್ಮ ಸಂಬಂಧಿ ವೈಭವ್ ಪಾಂಡ್ಯ ಬರೋಬ್ಬರಿ 4.3 ಕೋಟಿ ರೂ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಆರೋಪದಡಿಯಲ್ಲಿ ಪಾಂಡ್ಯ ಸಂಬಂಧಿ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಸಹೋದರ
ವಾಸ್ತವವಾಗಿ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ವೈಭವ್ ಪಾಂಡ್ಯ ಒಟ್ಟಾಗಿ 2021ರಲ್ಲಿ ಪಾಲಿಮರ್ ಕಂಪನಿಯನ್ನು ಸ್ಥಾಪಿಸಿದ್ದರು. ಆ ಕಂಪನಿಯಲ್ಲಿ ಹಾರ್ದಿಕ್ ಮತ್ತು ಕೃನಾಲ್ ಇಬ್ಬರೂ ಶೇ 40ರಷ್ಟು ಷೇರುಗಳನ್ನು ಹೊಂದಿದ್ದರು. ವೈಭವ್ ಶೇ 20ರಷ್ಟು ಷೇರುಗಳನ್ನು ಹೊಂದಿದ್ದರು. ಇದೀಗ ವಂಚನೆ ಆರೋಪದ ಮೇಲೆ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ. ಈ ಮೂವರು ಒಟ್ಟಿಗೆ ಪಾಲಿಮರ್ ಉದ್ಯಮವನ್ನು ಸ್ಥಾಪಿಸಿದ ಬಳಿಕ ಪಾಂಡ್ಯ ಬ್ರದರ್ಸ್ಗೆ ತಿಳಿಯದಂತೆ ವೈಭವ್ ಪಾಂಡ್ಯ ತನ್ನದೇ ಆದ ಪಾಲಿಮರ್ ಉದ್ಯಮವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಅವರು ಹಾರ್ದಿಕ್ ಮತ್ತು ಕೃನಾಲ್‌ಗೆ ಮಾಹಿತಿ ನೀಡಿಲ್ಲ.
ಇದರಿಂದಾಗಿ ಹಾರ್ದಿಕ್ ಮತ್ತು ಕೃನಾಲ್ ಸುಮಾರು 4 ಕೋಟಿ 30 ಲಕ್ಷ ರೂಪಾಯಿಗಳ ಭಾರೀ ನಷ್ಟ ಅನುಭವಿಸಬೇಕಾಯಿತು. ಇದೀಗ ವೈಭವ್ ಪಾಂಡ್ಯ ಪ್ರತ್ಯೇಕ ಕಂಪನಿ ಶುರು ಮಾಡಿರುವ ವಿಚಾರ ಹಾರ್ದಿಕ್-ಕೃನಾಲ್‌ಗೆ ತಿಳಿದಿದ್ದು, ಸಹೋದರರಿಬ್ಬರು ವೈಭವ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮುಂಬೈನ ಆರ್ಥಿಕ ಅಪರಾಧ ವಿಭಾಗವು ಅವರನ್ನು ಬಂಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Thu, 11 April 24