ಏಷ್ಯಾಕಪ್ (Asia Cup 2023) ಸೂಪರ್ 4 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 228 ರನ್‌ಗಳ ಬೃಹತ್ ಸೋಲನುಭವಿಸಿದ ಪಾಕಿಸ್ತಾನ (India vs Pakistan) ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಬೌಲಿಂಗ್ ಜೀವಾಳವಾಗಿರುವ ತ್ರಿವಳಿ ಬೌಲರ್ಗಳ ಪೈಕಿ ಇಬ್ಬರು ವೇಗಿಗಳು ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ವೇಗಿಗಳಾದ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ (Haris Rauf, Naseem Shah) ಗಾಯಗೊಂಡಿದ್ದರು. ಹೀಗಾಗಿ ಹ್ಯಾರಿಸ್ ರೌಫ್ ಮೀಸಲು ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಇತ್ತ ಮೀಸಲು ದಿನದಂದು ಮೈದಾನಕ್ಕಿಳಿದಿದ್ದ ಮತ್ತೊಬ್ಬ ವೇಗಿ ಹ್ಯಾರಿಸ್ ರೌಫ್, ಭಾರತದ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ಇಂಜುರಿಗೆ ತುತ್ತಾದರು. ಹೀಗಾಗಿ ಓವರ್ ಪೂರ್ಣಗೊಳಿಸದೆ ಅವರು ಪೆವಿಲಿಯನ್ಗೆ ತೆರಳಬೇಕಾಯಿತು.
ESPNcricinfo ಪ್ರಕಾರ, ಗುರುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಪಂದ್ಯವನ್ನು ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಮಿಸ್ ಮಾಡಿಕೊಳ್ಳುವುದು ಖಚಿತವಾಗಿದೆ. ಇದು ಸಾಲದೆಂಬಂತೆ ಫೈನಲ್ ಪಂದ್ಯಕ್ಕೆ ಇವರಿಬ್ಬರು ಲಭ್ಯವಾಗುವುದು ಕೂಡ ಅನುಮಾನ ಎಂದು ವರದಿಯಾಗಿದೆ. ಗಮನಾರ್ಹವಾಗಿ, ಹ್ಯಾರಿಸ್ ರೌಫ್ ಪ್ರಸ್ತುತ ಈ ಕಾಂಟಿನೆಂಟಲ್ ಈವೆಂಟ್ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಆದರೆ ಭಾರತ ವಿರುದ್ಧದ ಪಂದ್ಯದ ಮೊದಲ ದಿನ ಇಂಜುರಿಗೊಳಗಾಗಿದ್ದ ರೌಫ್, ಮೀಸಲು ದಿನದಂದು ಮೈದಾನಕ್ಕೆ ಬರಲಿಲ್ಲ.
ಹಾರ್ದಿಕ್ ಇನ್ಸ್ವಿಂಗರ್ ಬ್ರಹ್ಮಾಸ್ತ್ರಕ್ಕೆ ಬೆದರಿದ ಬಾಬರ್; ಮೀಟರ್ ದೂರ ಹಾರಿ ಬಿದ್ದ ಬೇಲ್ಸ್! ವಿಡಿಯೋ ನೋಡಿ
ಇನ್ನು ಮೀಸಲು ದಿನದಂದು ಪಾಕಿಸ್ತಾನದ ಬೌಲಿಂಗ್ ದಾಳಿ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಸೀಮ್ ಶಾ ಅವರು ಭುಜದ ಗಾಯದಿಂದಾಗಿ ಭಾರತದ ಇನ್ನಿಂಗ್ಸ್‌ನ 49 ನೇ ಓವರ್‌ನಲ್ಲಿ ಮೈದಾನವನ್ನು ತೊರೆಯಬೇಕಾಯಿತು. ಹೀಗಾಗಿ ಓವರ್ನ ಉಳಿದ ಐದು ಎಸೆತಗಳನ್ನು ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಪೂರ್ಣಗೊಳಿಸಿದ್ದರು. ಇನ್ನು ಈ ಇಬ್ಬರು ಬೌಲರ್ಗಳು ಕೂಡ ಬ್ಯಾಟಿಂಗ್ಗೂ ಬರಲಿಲ್ಲ. ಇದರ ಪರಿಣಾಮವಾಗಿ ಪಾಕಿಸ್ತಾನ 8 ವಿಕೆಟ್ಗಳ ನಷ್ಟಕ್ಕೆ ತನ್ನ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಭಾರತ 228 ರನ್‌ಗಳ ಜಯ ಸಾಧಿಸಿತು.
Update: Naseem Shah and Haris Rauf are almost certain to miss Pakistan’s next game, against Sri Lanka on Thursday, and their participation in the final – should Pakistan get there – is also unsure 😔💔
– via ESPNcricinfo #AsiaCup2023 #INDvPAK
— Farid Khan (@_FaridKhan) September 11, 2023
ಒಂದು ವೇಳೆ ಮೇಲೆ ಹೇಳಿದ ಸುದ್ದಿ ನಿಜವಾದರೆ, ಪಾಕಿಸ್ತಾನ ತಂಡಕ್ಕೆ ಭಾರಿ ಹೊಡೆತ ಬೀಳುವುದಂತೂ ಖಚಿತ. ರೌಫ್ ಅಲಭ್ಯತೆಯಿಂದ ಟೀಂ ಇಂಡಿಯಾ ಬ್ಯಾಟರ್ಗಳ ಮುಂದೆ ಮಂಕಾಗಿದ್ದ ಪಾಕ್ ಬೌಲಿಂಗ್ ವಿಭಾಗ, ಸರಾಗವಾಗಿ ರನ್ ಬಿಟ್ಟುಕೊಟ್ಟಿತು. ಅಂತಿಮ ಹಂತದಲ್ಲಿ ಇಂಜುರಿಗೆ ತುತ್ತಾದ ನಸೀಮ್ ಮಾತ್ರ ಭಾರತೀಯ ಬ್ಯಾಟರ್ಗಳ ರನ್ವೇಗಕ್ಕೆ ಕೊಂಚ ಕಡಿವಾಣ ಹಾಕಿದ್ದರು. ಇದೀಗ ಈ ಇಬ್ಬರ ಅಲಭ್ಯತೆ ಪಾಕ್ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:48 am, Tue, 12 September 23