ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ (India Women vs Australia Women) ಟಿ20 ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶನಿವಾರ ರಾತ್ರಿ ಮುಂಬೈನ (Mumbai) ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆಸೀಸ್ 7 ರನ್ಗಳ ರೋಚಕ ಜಯ ಸಾಧಿಸಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವಿಗೆ ಕಠಿಣ ಹೋರಾಟ ನಡೆಸಿದ ಭಾರತೀಯ ಮಹಿಳೆಯರಿಗೆ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಹರ್ಮನ್ (Harmanpreet Kaur) ಪಡೆಗೆ ತವರಿನಲ್ಲೇ ಭಾರೀ ಮುಖಭಂಗವಾದರೆ ಇತ್ತ ಕಾಂಗರೂ ಪಡೆ 3-1 ಅಂತರದಿಂದ ಟಿ20 ಸರಣಿ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಮಹಿಳಾ ತಂಡ ಆರಂಭದಲ್ಲೇ ಬೆತ್ ಮೋನಿ (2) ಹಾಗೂ ತಹಿಲಾ ಮೆಕ್ಘ್ರಾತ್ (9) ವಿಕೆಟ್ ಕಳೆದುಕೊಂಡಿತು. ನಾಯಕ ಅಲಿಸ್ಸಾ ಹೀಲೆ 30 ರನ್ಗಳಿಸಿದ್ದಾಗ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಶುರುವಾಗಿದ್ದು ಎಲಿಸ್ಸಾ ಪೆರಿ ಸ್ಫೋಟಕ ಆಟ. ಇವರಿಗೆ ಗಾರ್ಡನರ್ ಅದ್ಭುತ ಸಾಥ್ ನೀಡಿದರು. ಭಾರತೀಯ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಪೆರಿ ಕೇವಲ 42 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 72 ರನ್ ಚಚ್ಚಿದರು.
IPL 2023: ಹೊಸ ಅವತಾರದಲ್ಲಿ ಗೇಲ್; ಐಪಿಎಲ್ಗೆ ಯೂನಿವರ್ಸಲ್ ಬಾಸ್ ರೀ ಎಂಟ್ರಿ..!
ಗಾರ್ಡನರ್ 27 ಎಸೆತಗಳಲ್ಲಿ ತಲಾ 3 ಫೋರ್, ಸಿಕ್ಸರ್ನೊಂದಿಗೆ 42 ರನ್ ಬಾರಿಸಿದರು. ಕೊನೆಯಲ್ಲಿ ಬಂದ ಗ್ರೇಸ್ ಹ್ಯಾರಿಸ್ ಅಬ್ಬರಿಸಿ ಕೇವಲ 12 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರು. ಆಸ್ಟ್ರೇಲಿಯಾ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಭಾರತ ಪರ ದೀಪ್ತಿ ಶರ್ಮಾ ದುಬಾರಿ ಆಗುವ ಜೊತೆಗೆ 2 ವಿಕೆಟ್ ಪಡೆದರು. ರಾಧಾ ಯಾದವ್ 1 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಕಳಪೆ ಆರಂಭ ಪಡೆದುಕೊಂಡಿತು. 50 ರನ್ಗೂ ಮೊದಲೇ ಮುಖ್ಯ 3 ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂದಾನ 16 ರನ್ಗೆ ಔಟಾದರೆ, ಶಫಾಲಿ ವರ್ಮಾ 20 ರನ್ಗೆ ನಿರ್ಗಮಿಸಿದರು. ಜೆಮಿಯಾ ರೋಡ್ರಿಗಸ್ ಕಳಪೆ ಫಾರ್ಮ್ ಮುಂದುವರೆಸಿ 8 ರನ್ಗೆ ನಿರ್ಗಮಿಸಿದರು. ಹೀಗೆ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ದೇವಿಕಾ ವೈದ್ಯ ಆಸರೆಯಾದರು.
ತಂಡದ ಗೆಲುವಿಗೆ ಹೋರಾಟ ನಡೆಸಿದ ಈ ಜೋಡಿ ಬಿರುಸಿನ ಆಟವಾಡಿತು. 72 ರನ್ಗಳ ಜೊತೆಯಾಟ ಆಡಿದ ಕೌರ್-ವೈದ್ಯ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕೌರ್ ದೊಡ್ಡ ಹೊಡೆತಕ್ಕೆ ಮಾರುಹೋಗಿ 30 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ದೇವಿಕಾ ಕೂಡ 26 ಎಸೆತಗಳಲ್ಲಿ 32 ರನ್ ಬಾರಿಸಿ ಸ್ಟಂಪ್ಔಟ್ ಆದರು.
ಕೊನೆಯಲ್ಲಿ ರಿಚ್ಚಾ ಘೋಷ್ ಕ್ರೀಸ್ಗೆ ಬಂದು ಸ್ಫೋಟಕ ಆಟವಾಡಿ ಹೋರಾಡಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೆಯ 12 ಎಸೆತಗಳಲ್ಲಿ ಭಾರತದ ಗೆಲುವಿಗೆ 38 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ನಲ್ಲಿ ಎರಡು ಸಿಕ್ಸ್, ಒಂದು ಬಾರಿಸಿ ಒಟ್ಟು 19 ರನ್ಗಳು ಬಂದವು. ಅಂತಿಮ 6 ಎಸೆತಗಳಲ್ಲಿ 20 ರನ್ಗಳು ಬೇಕಿದ್ದಾಗ 12 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಸರಣಿ ಗೆಲ್ಲುವ ಆಸೆ ಕೈಚೆಲ್ಲಿತು. ರಿಚ್ಚಾ ಘೋಷ್ 19 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 40 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:08 am, Sun, 18 December 22