INDW vs AUSW: ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಆಸೀಸ್: ಭಾರತೀಯ ಮಹಿಳೆಯರಿಗೆ ಎರಡನೇ ಸೋಲು
India Women vs Australia Women: ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಿಸುವ ಮೂಲಕ ಮುನ್ನಡೆ ಸಾಧಿಸಿದೆ. ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಟಿ20 ಸರಣಿ ಆಡುತ್ತಿದ್ದು ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಬುಧವಾರ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 21 ರನ್ಗಳ ಜಯ ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡಿದೆ. ಕಾಂಗರೂ ಪಡೆಯ ಬ್ಯಾಟಿಂಗ್-ಬೌಲಿಂಗ್ ಅಬ್ಬರಕ್ಕೆ ತಬ್ಬಿಬ್ಬಾದ ಭಾರತ ಮಹಿಳಾ ತಂಡ ಎರಡನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಆಸೀಸ್ 9 ವಿಕೆಟ್ಗಳ ಜಯ ಸಾಧಿಸಿದರೆ, ದ್ವಿತೀಯ ಟಿ20ಯಲ್ಲಿ ನಡೆದ ಸೂಪರ್ ಓವರ್ನಲ್ಲಿ ಭಾರತ ಗೆಲುವು ಕಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಿಸುವ ಮೂಲಕ ಮುನ್ನಡೆ ಸಾಧಿಸಿದೆ. ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ತೃತೀಯ ಟಿ20 ಯಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಮೊದಲ ಓವರ್ನಲ್ಲೇ ರೇಣುಕಾ ಸಿಂಗ್ ಬೌಲಿಂಗ್ನಲ್ಲಿ ಅಲಿಸ್ಸಾ ಹೀಲೆ (1) ಔಟಾದರು. ನಂತರದ ಓವರ್ನಲ್ಲಿ ತಹಿಲಾ ಮೆಕ್ಘ್ರತ್ ಕೂಡ 1 ರನ್ಗೆ ನಿರ್ಗಮಿಸಿದರು. ನಂತರ ಬೆತ್ ಮೂನೆ ಹಾಗೂ ಎಲಿಸ್ಸಾ ಪೆರಿ ಉತ್ತಮ ಜೊತೆಯಾಟ ಆಡಿ ತಂಡವನ್ನು ಮೇಲೆತ್ತಿದರು. ಈ ಜೋಡಿ 64 ರನ್ಗಳ ಜೊತೆಯಾಟ ಆಡತು. ಚೆನ್ನಾಗಿಯೆ ಆಡುತ್ತಿದ್ದ ಮೋನಿ 22 ಎಸೆತಗಳಲ್ಲಿ 30 ರನ್ ಗಳಿಸಿ ದೇವಿಕಾ ಬೌಲಿಂಗ್ನಲ್ಲಿ ಔಟಾದರು. ಆಶ್ಲೆಗ್ ಗಾರ್ಡನ್ 7 ರನ್ಗೆ ಸುಸ್ತಾದರು.
ಅಪ್ಪನಂತೆಯೇ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್..!
ಈ ಸಂದರ್ಭ ಗ್ರಾನ್ಸ್ ಹ್ಯಾರಿಸ್ ಹಾಗೂ ಎಲಿಸ್ಸಾ ಪೆರಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಫೋಟಕ ಆಟವಾಡಿದ ಈ ಜೋಡಿ ಭಾರತೀಯ ಬೌಲರ್ಗಳ ಬೆವರಿಳಿಸಿದರು. ಪೆರಿ 47 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್ನೊಂದಿಗೆ 75 ರನ್ ಚಚ್ಚಿದರೆ, ಹ್ಯಾರಿಸ್ ಕೇವಲ 18 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್ನೊಂದಿಗೆ 41 ರನ್ ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಭಾರತ ಪರ ರೇಣುಕಾ ಸಿಂಗ್, ಅಂಜಲಿ, ದೀಪ್ತಿ ಹಾಗೂ ದೇವಿಕಾ ತಲಾ 2 ವಿಕೆಟ್ ಪಡೆದರು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಸ್ಮೃತಿ ಮಂದಾನ (1) ವಿಕೆಟ್ ಕಳೆದುಕೊಂಡಿತು. ಜೆಮಿಯಾ ರೋಡ್ರಿಗಸ್ 16 ರನ್ಗೆ ಔಟಾದರು. ಈ ಸಂದರ್ಭ ತಂಡವನ್ನು ಮೇಲೆತ್ತಿದ ಶಫಾಲಿ ವರ್ಮಾ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಅತ್ಯುತ್ತಮ ಜೊತೆಯಾಟ ಆಡಿದರು. ಗೆಲುವಿಗೆ ಹೋರಾಟ ನಡೆಸಿದ ಈ ಜೋಡಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಶಫಾಲಿ 41 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಕೌರ್ 27 ಎಸೆತಗಳಲ್ಲಿ 37 ರನ್ಗಳ ಕೊಡುಗೆ ನೀಡಿದರು. ಆದರೆ, ನಂತರ ಬಂದ ಬ್ಯಾಟರ್ಗಳ ಪೈಕಿ ದೀಪ್ತಿ ಶರ್ಮಾ (ಅಜೇಯ 25) ಬಿಟ್ಟರೆ ಮತ್ಯಾರೂ ಹೋರಾಟ ನಡೆಸಲಿಲ್ಲ.
20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ ಮಹಿಳಾ ತಂಡ 151 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ ಮತ್ತು ಗಾರ್ಡನರ್ ತಲಾ 2 ವಿಕೆಟ್ ಪಡೆದರೆ ಮೆಗನ್ ಸ್ಕಟ್ ಹಾಗೂ ನಿಕೋಲ ಕರೆ ತಲಾ 1 ವಿಕೆಟ್ ಪಡೆದರು. ಎಲಿಸ್ಸಾ ಪೆರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2 ರ ಹಿನ್ನಡೆಯಲ್ಲಿದೆ. ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 17 ರಂದು ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ