ಈ ಬಾರಿಯ ಐಪಿಎಲ್ (IPL 2024) ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 11 ಆಟಗಾರರನ್ನು ಬಿಡುಗಡೆ ಮಾಡಿತ್ತು. ಈ ಆಟಗಾರರ ಪಟ್ಟಿಯಲ್ಲಿ ಪರ್ಪಲ್ ಪಟೇಲ್ ಖ್ಯಾತಿಯ ಹರ್ಷಲ್ ಪಟೇಲ್ ಕೂಡ ಇದ್ದರು. ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ಪರ ಕಣಕ್ಕಿಳಿದಿದ್ದ ಹರ್ಷಲ್ ಪಟೇಲ್ ಈ ಬಾರಿ ತಂಡದಿಂದ ಹೊರಬಿದ್ದಿದ್ದರು.
ಆದರೆ ಇದೀಗ ದೇಶೀಯ ಅಂಗಳದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಈ ಮೂಲಕ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಷಲ್ ಪಟೇಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 19 ವಿಕೆಟ್ ಕಬಳಿಸಿ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದು ಹರ್ಷಲ್ ಪಟೇಲ್ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಏಕೆಂದರೆ ಕಳೆದ ಮೂರು ಸೀಸನ್ಗಳಲ್ಲಿ ಆರ್ಸಿಬಿ ಪರ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ ಒಟ್ಟು 65 ವಿಕೆಟ್ ಕಬಳಿಸಿದ್ದರು. ಆದರೆ ಐಪಿಎಲ್ 2023 ರಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಇದೇ ಕಾರಣದಿಂದಾಗಿ ಹರ್ಷಲ್ ಅವರನ್ನು ಆರ್ಸಿಬಿ ತಂಡದಿಂದ ಕೈ ಬಿಟ್ಟಿತ್ತು.
ಇದೀಗ ದೇಶೀಯ ಅಂಗಳದಲ್ಲಿ 10 ಪಂದ್ಯಗಳಿಂದ 19 ವಿಕೆಟ್ ಕಬಳಿಸುವ ಮೂಲಕ ಹರ್ಷಲ್ ಪಟೇಲ್ ಕಂಬ್ಯಾಕ್ ಮಾಡಿದ್ದಾರೆ. ಈ ಮೂಲಕ ಮತ್ತೆ ಐಪಿಎಲ್ ಕದ ತಟ್ಟುವ ಸೂಚನೆ ನೀಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಹರ್ಷಲ್ ಪಟೇಲ್ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಹೀಗಾಗಿ ಹರ್ಷಲ್ ಅವರ ಆರಂಭಿಕ ಬಿಡ್ಡಿಂಗ್ ಕೋಟಿಯಿಂದಲೇ ಶುರುವಾಗಲಿದೆ. ಈ 2 ಕೋಟಿ ಮೊತ್ತ ಎರಡಂಕಿಗೆ ತಲುಪಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ
ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಬಾರಿ ಹರಾಜು ಪಟ್ಟಿಯಲ್ಲಿ ಒಟ್ಟು 333 ಆಟಗಾರರು ಹೆಸರು ಕಾಣಿಸಿಕೊಂಡಿದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಇತ್ತ ಹರ್ಷಲ್ ಪಟೇಲ್ ಸೇರಿದಂತೆ ಒಟ್ಟು 23 ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಹೀಗಾಗಿ ಮೊದಲ ಸುತ್ತಿನಿಂದಲೇ ಆಟಗಾರರ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬರಬಹುದು.