
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ವೇದಿಕೆ ಸಿದ್ಧವಾಗಿದೆ. 8 ತಂಡಗಳ ನಡುವಣ ಈ ಟೂರ್ನಿಗೆ ನಾಳೆ (ಫೆ.19) ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾದರೆ, ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಈ ಬಾರಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿರುವುದರಿಂದ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅದರಂತೆ ಫೆಬ್ರವರಿ 23 ರಂದು ನಡೆಯಲಿರುವ ಪಂದ್ಯದಲ್ಲಿ ಬದ್ಧವೈರಿಗಳು ಕಾದಾಡಲಿದ್ದಾರೆ. ಈ ಹೈವೋಲ್ಟೇಜ್ ಪಂದ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗಬಹುದು.
ಗ್ರೂಪ್-ಎ ನಿಂದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್ಗೇರಿದರೆ, ಸೆಮಿಫೈನಲ್ನಲ್ಲಿ ಗ್ರೂಪ್-ಬಿ ನಿಂದ ಅರ್ಹತೆ ಪಡೆದ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡುವಂತಿಲ್ಲ.
ಇದಾಗ್ಯೂ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿದರೆ, ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಎದುರು ನೋಡಬಹುದು.
ಆದರೆ ಅದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಲೀಗ್ ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕು. ಈ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆದು, ಅಲ್ಲೂ ಜಯ ಸಾಧಿಸಿ ಫೈನಲ್ಗೇರಬೇಕು. ಹೀಗಾದರೆ ಮಾತ್ರ ಈ ಬಾರಿ ಭಾರತ ಮತ್ತು ಪಾಕಿಸ್ತಾನ್ ನಡುವಣ 2 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.