IND vs AUS: ಶತಕಗಳ ಅರ್ಧಶತಕ ಪೂರೈಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

Rohit Sharma Century: 2027ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಅಲಭ್ಯ ಎಂಬ ಟೀಕೆಗಳಿಗೆ 'ಹಿಟ್‌ಮ್ಯಾನ್' ಶತಕದ ಮೂಲಕ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಮೋಘ 33ನೇ ಏಕದಿನ ಶತಕ ಸಿಡಿಸಿದ ರೋಹಿತ್, ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. 40 ವರ್ಷ ವಯಸ್ಸಿನಲ್ಲೂ ಆಡುವ ಸಾಮರ್ಥ್ಯವಿದೆ ಎಂದು ತೋರಿಸಿದ್ದಾರೆ. ದೀರ್ಘ ವಿರಾಮದ ನಂತರವೂ ಲಯ ಕಂಡುಕೊಂಡು ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ.

IND vs AUS: ಶತಕಗಳ ಅರ್ಧಶತಕ ಪೂರೈಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ
Rohit Sharma

Updated on: Oct 25, 2025 | 4:32 PM

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಇರುವುದಿಲ್ಲ ಎನ್ನುತ್ತಿದ್ದವರಿಗೆ ಹಿಟ್‌ಮ್ಯಾನ್ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ವಾಸ್ತವವಾಗಿ 2027 ರ ವೇಳೆಗೆ ರೋಹಿತ್ ವಯಸ್ಸು 40 ವರ್ಷವನ್ನು ದಾಟಿರುತ್ತದೆ. ಹೀಗಾಗಿ ಆ ವಯಸ್ಸಿನಲ್ಲಿ ಅವರು ಆಡಲು ಸಾಧ್ಯವಿಲ್ಲ, ಆದ್ದರಿಂದ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಆ ಅಭಿಪ್ರಾಯಗಳನ್ನು ಸುಳ್ಳು ಮಾಡಿರುವ ರೋಹಿತ್ ಶರ್ಮಾ, 7 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟ್ ಹಿಡಿದರೂ ತಮ್ಮ ಹಳೆಯ ಲಯವನ್ನೇ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್, ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.

33 ನೇ ಏಕದಿನ ಶತಕ

ತಮ್ಮ ಏಕದಿನ ವೃತ್ತಿಜೀವನದ 33 ನೇ ಶತಕವನ್ನು ಪೂರೈಸಿರುವ ರೋಹಿತ್, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 105 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಶತಕದ ಗಡಿ ದಾಟಿದರು. ಅಡಿಲೇಡ್‌ನಲ್ಲಿ 73 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ರೋಹಿತ್, ಸಿಡ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದರು. ಈ ವರ್ಷ ರೋಹಿತ್ ಶರ್ಮಾ ಅವರ ಎರಡನೇ ಶತಕ ಇದಾಗಿದೆ. ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅವರ ಬ್ಯಾಟ್ ಆಗಸ ನೋಡಿತ್ತು. ಇದು ಮಾತ್ರವಲ್ಲದೆ ಈ ಶತಕದೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ. ಅಂದರೆ ರೋಹಿತ್ ಶರ್ಮಾ ಇದುವರೆಗೆ 50 ಶತಕಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 9ನೇ ಶತಕ

ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ತಂಡವೆಂದರೆ ಅದೊಂತರ ಒಲವು ಅದಕ್ಕಾಗಿಯೇ ಅವರು ಈ ತಂಡದ ವಿರುದ್ಧ ಒಂಬತ್ತು ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಆಸೀಸ್ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ನೆಲದಲ್ಲಿ ರೋಹಿತ್ ಇದುವರೆಗೆ ಆರನೇ ಶತಕ ಬಾರಿಸಿದ್ದಾರೆ. ಈ ಮೂಲಕ ಐದು ಶತಕಗಳನ್ನು ಬಾರಿಸಿದ್ದ ಕೊಹ್ಲಿ ಮತ್ತು ಸಂಗಕ್ಕಾರ ಅವರನ್ನು ಹಿಂದಿಕ್ಕಿದರು.

259 ದಿನಗಳ ನಂತರ ಶತಕ

ರೋಹಿತ್ ಶರ್ಮಾ ಸರಿಸುಮಾರು 259 ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದಾರೆ. ಹಿಂದಿನ ಶತಕ ಫೆಬ್ರವರಿ 2025 ರಲ್ಲಿ ಕಟಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬಂದಿತ್ತು. ರೋಹಿತ್ ಇದುವರೆಗೆ 276 ಏಕದಿನ ಪಂದ್ಯಗಳನ್ನು ಆಡಿದ್ದು, 268 ಇನ್ನಿಂಗ್ಸ್‌ಗಳಲ್ಲಿ 49.21 ಸರಾಸರಿಯಲ್ಲಿ 11,368 ರನ್ ಗಳಿಸಿದ್ದಾರೆ, ಇದರಲ್ಲಿ 33 ಶತಕಗಳು ಮತ್ತು 59 ಅರ್ಧಶತಕಗಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Sat, 25 October 25