ಭಾರತದ ಕೃಪಾಕಟಾಕ್ಷ ದೊರೆತರಷ್ಟೇ ಪಾಕ್ ತಂಡಕ್ಕೆ ಏಷ್ಯಾಕಪ್ ಫೈನಲ್ ಟಿಕೆಟ್..!
Asia Cup 2023: ವಾಸ್ತವವಾಗಿ ಟೀಂ ಇಂಡಿಯಾ ಎದುರು 228 ರನ್‌ಗಳ ಬೃಹತ್ ಸೋಲು ಅನುಭವಿಸಿರುವ ಪಾಕಿಸ್ತಾನ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ ತಂಡದ ನೆಟ್ ರನ್ರೇಟ್ ಕೂಡ ಮೈನಸ್ -1.892 ಕ್ಕೆ ಇಳಿದಿದೆ.
ಭಾರತದೆದುರಿನ ಏಕೈಕ ಸೋಲು ಪಾಕಿಸ್ತಾನ (India vs Pakistan) ತಂಡದ ಲೆಕ್ಕಾಚಾರವನ್ನು ಸಂಪೂರ್ಣ ಬುಡಮೇಲು ಮಾಡಿದೆ. ರೋಹಿತ್ (Rohit Sharma) ಪಡೆಯ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಯಿಂಟ್ ಟೇಬಲ್ ಸೇರಿದಂತೆ ಪ್ರದರ್ಶನದಲ್ಲೂ ಅಗ್ರಸ್ಥಾನವನ್ನು ಕಾಪಾಡಿಕೊಂಡಿದ್ದ ಬಾಬರ್ ಪಡೆ, ಟೀಂ ಇಂಡಿಯಾ (Team India) ನೀಡಿದ ಒಂದೇ ಒಂದು ಸೋಲಿನ ಶಾಕ್ಗೆ ಚೇತರಿಸಿಕೊಳ್ಳಲಾಗದಷ್ಟು ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ಟೀಂ ಇಂಡಿಯಾ ಎದುರು 228 ರನ್‌ಗಳ ಬೃಹತ್ ಸೋಲು ಅನುಭವಿಸಿರುವ ಪಾಕಿಸ್ತಾನ ಏಷ್ಯಾಕಪ್ (Asia Cup 2023) ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ ತಂಡದ ನೆಟ್ ರನ್ರೇಟ್ ಕೂಡ ಮೈನಸ್ -1.892 ಕ್ಕೆ ಇಳಿದಿದೆ. ಇದು ಪಾಕ್ ಪಡೆಯ ಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಹೀಗಾಗಿ ಪಾಕಿಸ್ತಾನ ತಂಡ ಈ ಕಾಂಟಿನೆಂಟಲ್ ಈವೆಂಟ್ನ ಫೈನಲ್ ಸುತ್ತಿಗೆ ಪ್ರವೇಶ ಪಡೆಯಬೇಕೆಂದರೆ ಭಾರತದ ಕೃಪಾಕಟಾಕ್ಷ ದೊರೆಯಲೇಬೇಕಾಗಿದೆ.
ಈ ಉಭಯ ತಂಡಗಳ ಕದನದ ಬಳಿಕ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಈ ಮೊದಲು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ, ಏಕೈಕ ಗೆಲುವಿನೊಂದಿಗೆ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇತ್ತ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ ಏಕಾಏಕಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಪಾಕ್ ವಿರುದ್ಧ 228 ರನ್‌ಗಳ ಬೃಹತ್ ಜಯ ಸಾಧಿಸಿದ ಭಾರತ +4.560 ನೆಟ್ ರನ್ರೇಟ್ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತದೆದುರು ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ -1.892 ನೆಟ್ ರನ್ರೇಟ್ನೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ. ಇನ್ನು ಎರಡನೇ ಸ್ಥಾನದಲ್ಲಿಯೇ ಮುಂದುವರೆದಿರುವ ಶ್ರೀಲಂಕಾ +0.420ನೆಟ್ ರನ್ರೇಟ್ ಹೊಂದಿದೆ.
228 ರನ್‌ಗಳ ದಾಖಲೆಯ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಭಾರತ! ಮೂರನೇ ಸ್ಥಾನಕ್ಕೆ ಜಾರಿದ ಪಾಕ್
ಪಾಯಿಂಟ್ ಪಟ್ಟಿ ಹೇಗಿದೆ?
ಮಂಗಳವಾರ ನಡೆಯಲಿರುವ ತನ್ನ ಎರಡನೇ ಸೂಪರ್ 4 ಪಂದ್ಯದಲ್ಲಿ ಭಾರತ ಹಾಲಿ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾವನ್ನು ಎದುರಿಸಲಿದೆ. ಪಂದ್ಯಾವಳಿಯ ಸೂಪರ್ 4 ಹಂತದಲ್ಲಿ ಭಾರತವನ್ನು ಎದುರಿಸುವ ಮೊದಲು ಬಾಬರ್ ಪಡೆ ಬಾಂಗ್ಲಾದೇಶ ತಂಡವನ್ನು ಮಣಿಸಿತ್ತು. ಈ ಮೂಲಕ 2 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಇದೀಗ ಈ ಸುತ್ತಿನಲ್ಲಿ ಪಾಕ್ ತಂಡಕ್ಕೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಗ್ರೀನ್ ಆರ್ಮಿ ತನ್ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಪಾಕಿಸ್ತಾನವು ಸೂಪರ್ 4 ಅಂಕಪಟ್ಟಿಯಲ್ಲಿ ಶ್ರೀಲಂಕಾಕ್ಕಿಂತ ಹಿಂದಿದ್ದು, ಬಾಂಗ್ಲಾದೇಶ ಕೊನೆಯ ಸ್ಥಾನ ಪಡೆಯುವುದರೊಂದಿಗೆ ಫೈನಲ್ ರೇಸ್ನಿಂದ ಈಗಾಗಲೇ ಹೊರಗುಳಿದಿದೆ.
ಪಾಕ್ ಫೈನಲ್ ತಲುಪಲು ಏನು ಮಾಡಬೇಕು?
ಸೂಪರ್ 4 ಪಾಯಿಂಟ್‌ಗಳ ಪಟ್ಟಿಯಲ್ಲಿರುವಂತೆ, ಶ್ರೀಲಂಕಾ (+0.420) ಪಾಕಿಸ್ತಾನಕ್ಕಿಂತ (-1.892) ಉತ್ತಮ ನಿವ್ವಳ ರನ್ ರೇಟ್ ಅನ್ನು ಹೊಂದಿದೆ. ಹೀಗಾಗಿ ಅರ್ಹತಾ ರೇಸ್‌ನಲ್ಲಿ ಜೀವಂತವಾಗಿರಲು ಪಾಕಿಸ್ತಾನ ತನ್ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಲೇಬೇಕಾಗಿದೆ. ಹಾಗೆಯೇ ಟೀಂ ಇಂಡಿಯಾ ತನ್ನ ಉಳಿದ ಎರಡು ಸೂಪರ್ ಪಂದ್ಯಗಳನ್ನು (ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ) ಗೆದ್ದರೆ, ಸುಲಭವಾಗಿ ಫೈನಲ್ ಪ್ರವೇಶಿಸಲಿದೆ.
ಭಾರತದ ಕೈಲಿದ ಪಾಕಿಸ್ತಾನದ ಭವಿಷ್ಯ
ಒಂದು ವೇಳೆ ಶ್ರೀಲಂಕಾ ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದರೆ ಅಂದರೆ, ಗೆಲುವು ಸಾಧಿಸಿದರೆ ಹಾಲಿ ಚಾಂಪಿಯನ್‌ಗಳು ಏಷ್ಯಾಕಪ್ ಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಹೀಗಾಗಿ ಬಾಬರ್ ಪಡೆ ಫೈನಲ್ ತಲುಪಬೇಕೆಂದರೆ ಭಾರತವು ಬಾಂಗ್ಲಾದೇಶದ ಎದುರು ಸೋಲನ್ನು ಅನುಭವಿಸಿದರೆ ಮಾತ್ರ ಅವರಿಗೊಂದು ಅವಕಾಶವಿರಲ್ಲಿದೆ. ಇದರ ಹೊರತಾಗಿ ಮಂಗಳವಾರ ನಡೆಯುವ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತದೆದುರು ಸೋತರೆ ಪಾಕಿಸ್ತಾನಕ್ಕೆ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಸಿಗಲಿದೆ. ಆದರೆ ಶ್ರೀಲಂಕಾ ವಿರುದ್ಧದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುವುದು ಕೂಡ ಅಗತ್ಯವಾಗಿರಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Tue, 12 September 23