ICC: ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ ಮತ್ತಷ್ಟು ಹೆಚ್ಚಳ; ಐಸಿಸಿ ಮಹತ್ವದ ನಿರ್ಧಾರ

ICC: ಮಹಿಳೆಯರ ವಿಶ್ವಕಪ್ ಇದೇ ಅಕ್ಟೋಬರ್ 3 ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 10 ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿ ಆರಂಭಕ್ಕೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಐಸಿಸಿ, ಪುರುಷರ ಟಿ20 ವಿಶ್ವಕಪ್​ನಂತೆ ಮಹಿಳೆಯರ ಟಿ20 ವಿಶ್ವಕಪ್​ನಲ್ಲೂ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

ICC: ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ ಮತ್ತಷ್ಟು ಹೆಚ್ಚಳ; ಐಸಿಸಿ ಮಹತ್ವದ ನಿರ್ಧಾರ
ಮಹಿಳಾ ಟಿ20 ವಿಶ್ವಕಪ್

Updated on: Jul 22, 2024 | 7:28 PM

ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ 9ನೇ ಆವೃತ್ತಿಯ ಪುರುಷರ ಟಿ20 ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದ ಐಸಿಸಿ, ಇದೀಗ ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಯತ್ತ ಹೆಜ್ಜೆ ಇಟ್ಟಿದೆ. ಮಹಿಳೆಯರ ವಿಶ್ವಕಪ್ ಇದೇ ಅಕ್ಟೋಬರ್ 3 ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 10 ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿ ಆರಂಭಕ್ಕೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಐಸಿಸಿ, ಪುರುಷರ ಟಿ20 ವಿಶ್ವಕಪ್​ನಂತೆ ಮಹಿಳೆಯರ ಟಿ20 ವಿಶ್ವಕಪ್​ನಲ್ಲೂ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

ಪುರುಷರ ಟಿ20 ವಿಶ್ವಕಪ್​ನಲ್ಲಿ 20 ತಂಡಗಳು ಭಾಗಿ

ವಾಸ್ತವವಾಗಿ ಇತ್ತಿಚೆಗೆ ಮುಕ್ತಾಯಗೊಂಡ ಪುರುಷರ ಟಿ20 ವಿಶ್ವಕಪ್​ನಲ್ಲಿ ಬರೋಬ್ಬರಿ 20 ತಂಡಗಳು ಭಾಗವಹಿಸಿದ್ದವು. ಟಿ20 ವಿಶ್ವಕಪ್​ನಲ್ಲಿ ಇಷ್ಟೊಂದು ತಂಡಗಳು ಭಾಗವಹಿಸಿದ್ದು, ಇದೇ ಮೊದಲು. ಇದಕ್ಕೂ ಮೊದಲು ಅಂದರೆ 2022 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ 16 ತಂಡಗಳು ಸ್ಪರ್ಧಿಸಿದ್ದವು. ಆದರೆ ಆ ಬಳಿಕ ವಿಶ್ವದಲ್ಲಿ ಹೆಚ್ಚುತ್ತಿರುವ ಟಿ20 ಕ್ರಿಕೆಟ್​ನ ಕ್ರೇಜ್​ ಅನ್ನು ಪರಿಗಣಿಸಿದ ಐಸಿಸಿ, 16 ತಂಡಗಳ ಬದಲು 20 ತಂಡಗಳನ್ನು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಸಿತ್ತು. ಇದೀಗ ಮಹಿಳಾ ಟಿ20 ವಿಶ್ವಕಪ್​ನಲ್ಲೂ ಈ ಯೋಜನೆಯನ್ನು ಜಾರಿಗೆ ತರಲು ಐಸಿಸಿ ಮುಂದಾಗಿದೆ.

2030ರ ವೇಳೆಗೆ ತಂಡಗಳ ಸಂಖ್ಯೆ ಹೆಚ್ಚಳ

ಐಸಿಸಿಯ ವಾರ್ಷಿಕ ಸಮ್ಮೇಳನವು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಶನಿವಾರ ಮತ್ತು ಭಾನುವಾರದಂದು ನಡೆಯಿತು. ಇದರಲ್ಲಿ ಮಂಡಳಿಯ ಸಭೆಯ ಹೊರತಾಗಿ, ವಾರ್ಷಿಕ ಸಾಮಾನ್ಯ ಸಭೆ (AGM) ಸಹ ನಡೆಯಿತು. ಈ ಸಭೆಯಲ್ಲಿ, ಎಲ್ಲಾ ಐಸಿಸಿ ಸದಸ್ಯ ಮಂಡಳಿಗಳ ಅಧಿಕಾರಿಗಳು ಉಪಸ್ಥಿತರಿದ್ದು, ಕೆಲವು ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಪ್ರಮುಖವಾದದ್ದು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವುದು. ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಸಮಾನತೆಯನ್ನು ಉತ್ತೇಜಿಸುವ ಅಭಿಯಾನದ ಭಾಗವಾಗಿ ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

2030 ರಲ್ಲಿ 16 ತಂಡಗಳು ಕಣಕ್ಕೆ

ಹಂತಹಂತವಾಗಿ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಅಂತಾರಾಷ್ಟ್ರೀಯ ಮಂಡಳಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಕಟಣೆಯಂತೆ ಈ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್​ನಲ್ಲಿ ಮೊದಲೇ ನಿರ್ಧರಿಸಿರುವಂತೆ 10 ತಂಡಗಳು ಕಣಕ್ಕಿಳಿಯಲಿವೆ. ಆದರೆ ಮುಂದಿನ ಆವೃತ್ತಿಯಲ್ಲಿ ಅಂದರೆ, 2026ರಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಈ ತಂಡಗಳ ಸಂಖ್ಯೆ 12ಕ್ಕೆ ಏರಿಕೆಯಾಗಲಿದ್ದು, ನಂತರ 2030ರ ವೇಳೆಗೆ ಇವುಗಳ ಸಂಖ್ಯೆ 16ಕ್ಕೆ ಏರಿಕೆಯಾಗಲಿದೆ. ಒಟ್ಟಾರೆ, ಮುಂಬರುವ ವರ್ಷಗಳಲ್ಲಿ ಹೆಚ್ಚು ಹೆಚ್ಚು ದೇಶಗಳು ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ