
ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ತಂಡ, ಒಂದರ ನಂತರ ಒಂದರಂತೆ ಆಘಾತಗಳನ್ನು ಎದುರಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧ 100 ಕ್ಕೂ ಅಧಿಕ ರನ್ಗಳಿಂದ ಸೋತ ಅವಮಾನದಲ್ಲಿದ್ದ ಪಾಕ್ ತಂಡಕ್ಕೆ, ತಂಡದ ಸ್ಫೋಟಕ ಆರಂಭಿಕ ಆಟಗಾರ ಫಖರ್ ಜಮಾನ್ ಗಾಯದಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಈ ಶಾಕ್ನಿಂದ ಹೊರಬರುವ ಮುನ್ನವೇ ಪಾಕ್ ತಂಡಕ್ಕೆ ಐಸಿಸಿ ದಂಡದ ಬರೆ ಎಳೆದಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಓವರ್ ರೇಟ್ ನಿಧಾನವಾಗಿದ್ದರಿಂದ ಐಸಿಸಿ ತಂಡದ ಪಂದ್ಯ ಶುಲ್ಕವನ್ನು ಕಡಿತಗೊಳಿಸಿದೆ. ಪಾಕಿಸ್ತಾನಿ ಆಟಗಾರರ ಪಂದ್ಯ ಶುಲ್ಕದಲ್ಲಿ ಶೇಕಡಾ ಐದು ರಷ್ಟು ಕಡಿತಗೊಳಿಸಲಾಗುವುದು. ಪಾಕಿಸ್ತಾನ ನಿಗದಿತ ಸಮಯದಲ್ಲಿ 50 ಓವರ್‌ಗಳನ್ನು ಬೌಲ್ ಮಾಡದ ಕಾರಣ ಇಡೀ ತಂಡಕ್ಕೆ ದಂಡ ವಿಧಿಸಲಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಪಾಕಿಸ್ತಾನ ತಂಡದ ವೇಗದ ಬೌಲರ್‌ಗಳು ನಿರಾಶದಾಯಕ ಪ್ರದರ್ಶನ ನೀಡಿದರು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರನ್ನು ಕಿವೀಸ್ ಬ್ಯಾಟರ್ಗಳು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ಹ್ಯಾರಿಸ್ ಮತ್ತು ಶಾಹಿದ್ ಅಫ್ರಿದಿ ಒಟ್ಟಾಗಿ 150 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು.
ವಾಸ್ತವವಾಗಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಆತಿಥೇಯ ರಾಷ್ಟ್ರವಾಗಿದೆ. ಆದರೆ ಈಗ ಈ ಪಂದ್ಯಾವಳಿಯ ಲೀಗ್ ಹಂತದಿಂದಲೇ ಹೊರಬೀಳುವ ಆತಂಕದಲ್ಲಿದೆ. ಏಕೆಂದರೆ ಈ ತಂಡವು ತನ್ನ ಮೊದಲ ಪಂದ್ಯವನ್ನು ಭಾರಿ ಅಂತರದಿಂದ ಸೋತಿದೆ. ಇದರಿಂದ ನೆಟ್ ರನ್ರೇಟ್ ಕೂಡ ಪಾತಳಕ್ಕೆ ಕುಸಿದಿದೆ. ಇದರ ಜೊತೆಗೆ ಪಾಕ್ ತಂಡ ತನ್ನ ಮುಂದಿನ ಪಂದ್ಯವನ್ನು ಭಾರತದ ವಿರುದ್ಧ ಆಡಬೇಕಾಗಿದೆ. ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಇನ್ನೂ ಬಾಂಗ್ಲಾದೇಶ ವಿರುದ್ಧ ಒಂದು ಪಂದ್ಯವನ್ನು ಆಡಬೇಕಿದೆ, ಅದರಲ್ಲಿ ಗೆದ್ದರೆ ಕಿವೀಸ್ ಪಡೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ.
ಫಖರ್ ಜಮಾನ್ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿರುವುದರಿಂದ ಪಾಕಿಸ್ತಾನದ ಮುಂದಿನ ಪ್ರಯಾಣವೂ ಕಷ್ಟಕರವಾಗಿದೆ. ಸ್ಯಾಮ್ ಅಯ್ಯೂಬ್ ಗಾಯದಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರಗಿದ್ದಾರೆ. ಇದೆಲ್ಲದರ ನಡುವೆ ಮಾಜಿ ನಾಯಕ ಬಾಬರ್ ಆಝಂ ಕೂಡ ತಮ್ಮ ಆಮೆಗತಿಯ ಬ್ಯಾಟಿಂಗ್ ಮೂಲಕ ತಂಡದ ತಲೆನೋವು ಹೆಚ್ಚಿಸಿದ್ದಾರೆ. ಪಾಕಿಸ್ತಾನ ಈಗ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 23 ರಂದು ಭಾರತದ ವಿರುದ್ಧ ಆಡಬೇಕಾಗಿದೆ. ಈ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾದ ಫಾರ್ಮ್ ನೋಡಿದರೆ, ಪಾಕಿಸ್ತಾನಕ್ಕೆ ಆ ಪಂದ್ಯ ಗೆಲ್ಲುವುದು ಕಷ್ಟವೆನಿಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ