ವಿಶ್ವಕಪ್ ಫೈನಲ್ನಲ್ಲಿ ಬಳಸಿದ್ದ ಮೋದಿ ಮೈದಾನದ ಪಿಚ್‌ಗೆ ಸರಾಸರಿ ರೇಟಿಂಗ್ ನೀಡಿದ ಐಸಿಸಿ
World Cup 2023: 2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಸೇರಿದಂತೆ ಒಟ್ಟು ಆರು ಪಂದ್ಯಗಳ ಪಿಚ್ಗಳಿಗೆ ಐಸಿಸಿ ಸರಾಸರಿ ರೇಟಿಂಗ್‌ಗಳನ್ನು ನೀಡಿದೆ. ಸರಾಸರಿ ರೇಟಿಂಗ್ ಪಡೆದ ಐದು ಪಿಚ್ಗಳಲ್ಲಿ ಟೀಂ ಇಂಡಿಯಾದ ಪಂದ್ಯಗಳು ಸೇರಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ.
2023ರ ಏಕದಿನ ವಿಶ್ವಕಪ್ (ODI World Cup 2023) ಫೈನಲ್ ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಸೇರಿದಂತೆ ಒಟ್ಟು ಆರು ಪಂದ್ಯಗಳ ಪಿಚ್ಗಳಿಗೆ ಐಸಿಸಿ ಸರಾಸರಿ ರೇಟಿಂಗ್‌ಗಳನ್ನು ನೀಡಿದೆ. ಸರಾಸರಿ ರೇಟಿಂಗ್ ಪಡೆದ 6 ಪಿಚ್ಗಳಲ್ಲಿ ಟೀಂ ಇಂಡಿಯಾದ 5 ಪಂದ್ಯಗಳು ಸೇರಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium) ನಡೆದಿತ್ತು. ಹಾಗೆಯೇ ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೋಲ್ಕತ್ತಾದಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳ ಪಿಚ್ಗಳಿಗೆ ಐಸಿಸಿ ಸರಾಸರಿ ರೇಟಿಂಗ್ ನೀಡಿದೆ.
5 ಪಿಚ್ಗಳಲ್ಲಿ ಭಾರತ ಆಡಿತ್ತು
ಮಾಧ್ಯಮ ವರದಿಗಳ ಪ್ರಕಾರ, ಫೈನಲ್ ಹೊರತುಪಡಿಸಿ ಐಸಿಸಿ, ಭಾರತ ಆಡಿದ ಇತರ ನಾಲ್ಕು ಪಂದ್ಯಗಳಿಗೆ ಸರಾಸರಿ ರೇಟಿಂಗ್ ನೀಡಿದೆ. ಇದರಲ್ಲಿ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ, ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯ, ಅಕ್ಟೋಬರ್ 29 ರಂದು ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯ ಮತ್ತು ನವೆಂಬರ್ 5 ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳು ಒಳಗೊಂಡಿವೆ.
ಫೈನಲ್ನಲ್ಲಿ ಭಾರತಕ್ಕೆ ಸೋಲು
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಬೇಕಾಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಭಾರತ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 240 ರನ್ ಕಲೆಹಾಕಿತ್ತು. 241 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತ್ತು.
IND vs AUS: ಟಿ20 ಸರಣಿ ಗೆದ್ದು ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ
ಪಾಕ್ ವಿರುದ್ಧ ಗೆಲುವು
ಫೈನಲ್‌ಗೂ ಮುನ್ನ ಅಕ್ಟೋಬರ್ 14ರಂದು ಇದೇ ಪಿಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಫೈನಲ್‌ಗೂ ಮುನ್ನ ಆಸ್ಟ್ರೇಲಿಯಾದ ಹಲವು ಮಾಜಿ ಕ್ರಿಕೆಟಿಗರು ಈ ಪಿಚ್‌ಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಫೈನಲ್ ಪಂದ್ಯಕ್ಕೆ ಒಂದು ದಿನ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಈ ಪಿಚ್ ಉತ್ತಮ ಎಂದು ಬಣ್ಣಿಸಿದ್ದರು.
ಕೋಲ್ಕತ್ತಾದ ಪಿಚ್ ಕೂಡ ಸರಾಸರಿ
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದ ಪಿಚ್‌ಗೂ ಸಹ ಸರಾಸರಿ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು.
ಇದಕ್ಕೂ ಮೊದಲು ನವೆಂಬರ್ 5 ರಂದು ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಭಾರತ 243 ರನ್‌ಗಳಿಂದ ಗೆದ್ದುಕೊಂಡಿತು. ಈ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. 327 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 27.1 ಓವರ್‌ಗಳಲ್ಲಿ 83 ರನ್‌ಗಳಿಗೆ ಆಲೌಟ್ ಆಯಿತು.
ಉಳಿದ ಪಿಚ್ಗಳ ಕಥೆ ಇದು
ಕೋಲ್ಕತ್ತಾ ಹೊರತುಪಡಿಸಿ, ಲಕ್ನೋ ಮತ್ತು ಚೆನ್ನೈನಲ್ಲಿ ಭಾರತ ಆಡಿದ ಪಂದ್ಯಗಳ ಪಿಚ್ಗಳಿಗೂ ಐಸಿಸಿ ಸರಾಸರಿ ರೇಟಿಂಗ್ ನೀಡಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. 200 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 100 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 34.5 ಓವರ್ ಗಳಲ್ಲಿ 129 ರನ್ ಗಳಿಸಲಷ್ಟೇ ಶಕ್ತವಾಗಿ ಭಾರತ 100 ರನ್‌ಗಳ ಜಯ ಸಾಧಿಸಿತ್ತು.
ಮುಂಬೈ ಪಿಚ್‌ಗೆ ಕ್ಲೀನ್ ಚಿಟ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 15 ರಂದು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದ ಪಿಚ್‌ಗೆ ಐಸಿಸಿ ಕ್ಲೀನ್ ಚಿಟ್ ನೀಡಿದೆ. ವಾಸ್ತವವಾಗಿ ಈ ಪಿಚ್ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಅಂತರಾಷ್ಟ್ರೀಯ ಮಾಧ್ಯಮಗಳು ಬಿಸಿಸಿಐ ಮತ್ತು ಟೀಂ ಇಂಡಿಯಾ ಪಿಚ್ ಬದಲಾಯಿಸಿದೆ ಎಂದು ಆರೋಪಿಸಿದ್ದವು. ಆದರೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ನಡೆಯುವ ಪಿಚ್ ಅನ್ನು ಮೊದಲೇ ನಿರ್ಧರಿಸಲಾಗಿತ್ತು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Fri, 8 December 23