IND vs SL: ಐದು ಟೆಸ್ಟ್ ಅಥವಾ ಅಜೀವ ನಿಷೇಧ..! ಸಂಕಷ್ಟದಲ್ಲಿ ಜೈಸ್ವಾಲ್

Yashasvi Jaiswal ICC ban: ಕೊಲಂಬೊ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಸಿತಾ ಫೆರ್ನಾಂಡೊಗೆ ಹೆಲ್ಮೆಟ್‌ನಿಂದ ಗುದ್ದಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಈ ನಡೆ ICC ನಿಯಮಗಳ Level 4 ಉಲ್ಲಂಘನೆಯಾಗಿದ್ದು, ಐದು ಟೆಸ್ಟ್ ಪಂದ್ಯಗಳಿಂದ ಜೀವಾವಧಿ ನಿಷೇಧದಂತಹ ಕಠಿಣ ಶಿಕ್ಷೆ ಎದುರಿಸುವ ಸಾಧ್ಯತೆಯಿದೆ. ಜೈಸ್ವಾಲ್ ವೃತ್ತಿಜೀವನಕ್ಕೆ ಇದು ದೊಡ್ಡ ಹೊಡೆತ ನೀಡಬಹುದೆಂಬ ಆತಂಕವಿದೆ. ICC ನಿರ್ಧಾರ ಕುತೂಹಲ ಮೂಡಿಸಿದೆ.

IND vs SL: ಐದು ಟೆಸ್ಟ್ ಅಥವಾ ಅಜೀವ ನಿಷೇಧ..! ಸಂಕಷ್ಟದಲ್ಲಿ ಜೈಸ್ವಾಲ್
Yashasvi Jaiswal

Updated on: Aug 23, 2026 | 8:42 PM

ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನಡೆದ ಅದೊಂದು ಘಟನೆ ಇದೀಗ ಯಶಸ್ವಿ ಜೈಸ್ವಾಲ್ (Yashasvi Jaiswal) ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡುವ ಸೂಚನೆ ನೀಡಿದೆ. ಐಸಿಸಿಯ (ICC) ಕಟ್ಟುನಿಟ್ಟಾದ ನಿಯಮಗಳು ಜೈಸ್ವಾಲ್​ಗೆ ಯಾವ ಶಿಕ್ಷೆ ವಿಧಿಸುತ್ತವೆ ಎಂಬುದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಆದಾಗ್ಯೂ ಜೈಸ್ವಾಲ್​ಗೆ ಐಸಿಸಿ ಎಚ್ಚರಿಕೆ ನೀಡಿ ದೊಡ್ಡ ಶಿಕ್ಷೆಯಿಂದ ಪಾರು ಮಾಡುತ್ತದೋ ಅಥವಾ ನಿಯಮಗಳು ಎಲ್ಲರಿಗೂ ಒಂದೇ ಎಂಬ ಕಟು ನಿರ್ಧಾರದೊಂದಿಗೆ ಜೈಸ್ವಾಲ್​ಗೂ ಶಿಕ್ಷೆ ವಿಧಿಸುತ್ತದೋ ಎಂಬುದನ್ನು ಕಾದುನೋಡಬೇಕಿದೆ.

ಆಕ್ರಮಣಕಾರಿಯಾಗಿ ಸಂಭ್ರಮಿಸಿದ ಫೆರ್ನಾಂಡೊ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಯಶಸ್ವಿ ಜೈಸ್ವಾಲ್ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 45 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಔಟಾದ ಹತಾಶೆಯಿಂದಲೋ, ಎದುರಾಳಿ ತಂಡದ ಬೌಲರ್​ ಕೆಣಕ್ಕಿದ ಎಂತಲೋ ತಾಳ್ಮೆ ಕಳೆದುಕೊಂಡ ಜೈಸ್ವಾಲ್ ದೊಡ್ಡ ತಪ್ಪನ್ನು ಮಾಡಿದ್ದಾರೆ. ವಾಸ್ತವವಾಗಿ ಲಂಕಾ ವೇಗಿ ಅಸಿತಾ ಫೆರ್ನಾಂಡೊ ಬೌಲ್ ಮಾಡಿದ 17 ನೇ ಓವರ್‌ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಔಟಾದರು. ಔಟಾಗುವುದಕ್ಕೂ ಮುನ್ನ ಜೈಸ್ವಾಲ್ ಅದೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದಿದ್ದರು. ಹೀಗಾಗಿ ಜೈಸ್ವಾಲ್​ರನ್ನು ಔಟ್ ಮಾಡಿದ ಕೂಡಲೇ ಫೆರ್ನಾಂಡೊ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.

ಶಿಕ್ಷೆಗೆ ಗುರಿಯಾಗುವ ಸಾಧ್ಯತೆ

ಅಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗ ಅವರನ್ನು ಕೆಣಕ್ಕುವ ಕೆಲಸಕ್ಕೆ ಫೆರ್ನಾಂಡೊ ಕೈಹಾಕಿದರು. ಇದರಿಂದ ಕೆರಳಿದ ಜೈಸ್ವಾಲ್, ಫೆರ್ನಾಂಡೊ ಬಳಿಗೆ ಬಂದು ವಾಗ್ವಾದದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್​ನಿಂದ ಫೆರ್ನಾಂಡೊ ತಲೆಗೆ ಲಗುವಾಗಿ ಗುದ್ದಿದರು. ಜೈಸ್ವಾಲ್ ಅವರ ಈ ನಡೆ ಐಸಿಸಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ.

IND vs SL: ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಕಲೆಹಾಕಿದ ಭಾರತ

ಲೆವೆಲ್ 4 ನಿಯಮ ಉಲ್ಲಂಘನೆ

ಐಸಿಸಿ ನಿಯಮಗಳ ಪ್ರಕಾರ, ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ದೈಹಿಕ ಹಲ್ಲೆ, ಗಾಯಗೊಳಿಸುವುದು ಅಥವಾ ಹಿಂಸಾಚಾರ (ಒದೆಯುವುದು, ಗುದ್ದುವುದು ಅಥವಾ ಹೊಡೆದಾಡುವುದು)ದಲ್ಲಿ ತೊಡಗಿಕೊಳ್ಳುವುದು ಲೆವೆಲ್ 4 ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಲೆವೆಲ್ 4 ಉಲ್ಲಂಘನೆಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಲೆವೆಲ್ 4 ನಿಯಮವನ್ನು ಉಲ್ಲಂಘಿಸಿದ ಆಟಗಾರನಿಗೆ ಐದು ಟೆಸ್ಟ್ ಪಂದ್ಯಗಳು ಅಥವಾ 10 ಏಕದಿನ ಪಂದ್ಯಗಳ ನಿಷೇಧದಿಂದ ಹಿಡಿದು ಜೀವಾವಧಿ ನಿಷೇಧದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಅದಾಗ್ಯೂ ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ಐಸಿಸಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us